ಗರ್ಭಿಣಿಯರಿಗೆ ಆರಂಭದ 2-3 ತಿಂಗಳು ವಾಂತಿ, ವಾಕರಿಕೆ ಉಂಟಾಗುವುದು ಸಹಜ. ಆದ್ರೆ ಇತರರಿಗೂ ಕೆಲವೊಮ್ಮೆ ತಿಂದ ಆಹಾರ ಹೊಟ್ಟೆಯಲ್ಲಿ ನಿಲ್ಲುವುದೇ ಇಲ್ಲ. ತಿಂದಿದ್ದೆಲ್ಲ ವಾಂತಿಯಾಗುತ್ತದೆ. ಹಗಲು, ರಾತ್ರಿ ಎರಡೂ ಸಮಯದಲ್ಲಿ ವಾಂತಿ ಬರುವುದುಂಟು.
ಇನ್ನು ಕೆಲವರಿಗೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿದ್ದಾಗ ವಾಂತಿಯಾಗುತ್ತದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿದ್ದಾಗ ವಾಂತಿಯಾಗ್ತಿದೆ ಎಂದು ಚಿಂತಿಸಬೇಕಿಲ್ಲ. ಅದಕ್ಕೆ ಕಾರಣ ಏನು ಅನ್ನೋದನ್ನು ತಿಳಿದಿಕೊಳ್ಳಿ.
ಆತಂಕ: ಖಾಲಿ ಹೊಟ್ಟೆಯಲ್ಲಿ ವಾಕರಿಕೆ ಮತ್ತು ವಾಂತಿಗೆ ಆತಂಕವು ಒಂದು ಕಾರಣವಾಗಿರಬಹುದು. ನೀವು ದಿನವಿಡೀ ಉದ್ವಿಗ್ನವಾಗಿದ್ದರೆ ಅಥವಾ ಬೆಳಿಗ್ಗೆ ಎದ್ದ ನಂತರ ನೀವು ಚಿಂತೆ ಮಾಡುತ್ತಿದ್ದರೆ, ಅದು ನಿಮಗೆ ವಾಂತಿ ಅಥವಾ ವಾಕರಿಕೆಯನ್ನು ತರಿಸುತ್ತದೆ.
ಸಕ್ಕರೆಯ ಮಟ್ಟ ಕುಸಿತ ಮತ್ತು ಹಸಿವು: ರಕ್ತದಲ್ಲಿ ಸಕ್ಕರೆ ಮಟ್ಟ ಕುಸಿದಿದ್ದರೆ, ಅತಿಯಾಗಿ ಹಸಿವಾಗಿದ್ದರೆ ಒಮ್ಮೊಮ್ಮೆ ಬೆಳಗ್ಗೆ ಎದ್ದ ತಕ್ಷಣ ವಾಂತಿಯಾಗುವ ಸಾಧ್ಯತೆ ಇರುತ್ತದೆ. ವಾಂತಿಯ ಜೊತೆಗೆ ತಲೆ ಕೂಡ ತಿರುಗಬಹುದು. ಮೂರ್ಛೆ ಹೋಗುವಂತೆಯೂ ಅನಿಸಬಹುದು. ಸಕ್ಕರೆ ಕಾಯಿಲೆ ಇರುವವರಿಗೆ ಒಮ್ಮೊಮ್ಮೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗಿ ಈ ರೀತಿ ಆಗುತ್ತದೆ. ಹಾಗಾಗಿ ಎದ್ದ ಕೂಡಲೇ ಏನನ್ನಾದರೂ ತಿಂದರೆ ಈ ಸಮಸ್ಯೆ ಇರುವುದಿಲ್ಲ.
ಮೈಗ್ರೇನ್ ಅಥವಾ ತಲೆನೋವು : ಮೈಗ್ರೇನ್ ಮತ್ತು ತಲೆನೋವಿನ ಸಮಸ್ಯೆ ಇದ್ದರೆ ಕೆಲವೊಮ್ಮೆ ವಾಂತಿಯಾಗುತ್ತದೆ. ಕ್ಲಸ್ಟರ್ ತಲೆನೋವು ವಾಕರಿಕೆಗೆ ಮುಖ್ಯ ಕಾರಣವಾಗಿರುತ್ತದೆ. ಹಸಿವು ಹಾಗೂ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾದ್ರೆ ಒಮ್ಮೊಮ್ಮೆ ಮೈಗ್ರೇನ್ ಕಾಣಿಸಿಕೊಳ್ಳಯತ್ತದೆ. ಬೆಳಿಗ್ಗೆ ಎದ್ದ ನಂತರ ನಿಮಗೆ ತಲೆನೋವು ಇದ್ದರೆ ವಾಂತಿ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಡಿಹೈಡ್ರೇಶನ್: ನಿರ್ಜಲೀಕರಣದ ಕಾರಣದಿಂದಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿದ್ದಾಗ ವಾಮಿಟ್ ಬರುತ್ತದೆ. ತಲೆತಿರುಗುವಿಕೆ, ಚರ್ಮ ಒಣಗಿದಂತಾಗುವುದು ಮುಂತಾದ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ನೀವು ಸಾಕಷ್ಟು ನೀರು ಕುಡಿಯಬೇಕು.