ಆರೋಗ್ಯವಂತ ವ್ಯಕ್ತಿಗೆ ನೀರು ಬೇಕೇಬೇಕು. ನಮ್ಮ ದೇಹದಲ್ಲಿ ಶೇಕಡಾ 50-60ರಷ್ಟು ನೀರಿನ ಅಂಶವಿರುತ್ತದೆ. ಫಿಟ್ನೆಸ್ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ದಿನಕ್ಕೆ ನಾಲ್ಕು ಲೀಟರ್ ನೀರು ಕುಡಿಯಬೇಕೆಂದು ವೈದ್ಯರು ಸಲಹೆ ನೀಡ್ತಾರೆ. ನೀರು ನಮ್ಮ ದೇಹಕ್ಕೆ ಪೋಷಕಾಂಶ ಹಾಗೂ ಆಮ್ಲಜನಕವನ್ನು ವರ್ಗಾಯಿಸುವ ಕೆಲಸ ಮಾಡುತ್ತದೆ. ನೀರು ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡುತ್ತದೆ.
ಬೆಳಿಗ್ಗೆ ಎದ್ದ ತಕ್ಷಣ ನಮ್ಮ ದೇಹಕ್ಕೆ ಸಾಕಷ್ಟು ನೀರು ಬೇಕಾಗುತ್ತದೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ 2-3 ಲೋಟ ನೀರನ್ನು ಕುಡಿಯಬೇಕು. ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದ್ರಿಂದ ನಮ್ಮ ದೇಹದಲ್ಲಿರುವ ವಿಷಕಾರಿ ಪದಾರ್ಥ ಸುಲಭವಾಗಿ ಹೊರಗೆ ಹೋಗುತ್ತದೆ. ಇದ್ರಿಂದ ರಕ್ತ ಸ್ವಚ್ಛವಾಗುತ್ತದೆ. ರಕ್ತ ಶುದ್ಧವಾಗ್ತಿದ್ದಂತೆ ಚರ್ಮ ಕೂಡ ಹೊಳಪು ಪಡೆಯುತ್ತದೆ.
ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯಿರುತ್ತದೆ. ಅದು ಸೋಂಕು ಹರಡುವ ಜೀವಕೋಶಗಳ ವಿರುದ್ಧ ಹೋರಾಡುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದ್ರೆ ದೇಹಕ್ಕೆ ಸೋಂಕಿನ ವಿರುದ್ಧ ಹೋರಾಡಲು ಮತ್ತಷ್ಟು ಶಕ್ತಿ ಬರುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದ್ರಿಂದ ತಲೆನೋವು, ದೇಹದ ನೋವು, ಹೃದಯ ಖಾಯಿಲೆ, ಅಧಿಕ ಹೃದಯ ಬಡಿತ, ಅಪಸ್ಮಾರ, ಬೊಜ್ಜು, ಅಸ್ತಮಾ, ಕ್ಷಯ, ಕಿಡ್ನಿ ಸಮಸ್ಯೆ, ಮೂತ್ರಪಿಂಡದ ರೋಗ, ವಾಂತಿ, ಗ್ಯಾಸ್, ಮಧುಮೇಹ, ಅತಿಸಾರ, ಮಲಬದ್ಧತೆ, ಕ್ಯಾನ್ಸರ್, ಕಣ್ಣು, ಮೂಗು, ಕಿವಿ ಹಾಗೂ ಗಂಟಲು ನೋವಿನ ರೋಗಗಳು ಕಡಿಮೆಯಾಗುತ್ತವೆಯಂತೆ.
ಇದ್ರಿಂದ ಚಯಾಪಚಯ ಕ್ರಿಯೆ ಸರಿಯಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುತ್ತ ಬಂದ್ರೆ ತೂಕ ಇಳಿಯುತ್ತದೆ. ಹೊಸ ಜೀವಕೋಶಗಳು ಹುಟ್ಟಿಕೊಳ್ಳುವ ಜೊತೆಗೆ ಸ್ನಾಯುಗಳು ಬಲ ಪಡೆಯುತ್ತವೆ.