ಪ್ಲಾಸ್ಟಿಕ್ ನಿಂದ ಉಂಟಾಗುವ ಮಾಲಿನ್ಯ ಇಡೀ ಜಗತ್ತಿಗೆ ಮಾರಕವಾಗ್ತಾ ಇದೆ. ಅನೇಕ ದೇಶಗಳು ಪ್ಲಾಸ್ಟಿಕ್ ತ್ಯಾಜ್ಯವನ್ನು ನಿರ್ಮೂಲನೆ ಮಾಡಲು ಸಾಕಷ್ಟು ಪ್ರಯತ್ನಗಳನ್ನು ನಡೆಸ್ತಾ ಇದೆ. ಆದ್ರೆ ಸರ್ಕಾರಗಳು ಎಷ್ಟೇ ನಿಯಮಗಳನ್ನು ರೂಪಿಸಿದ್ರೂ, ಸಾರ್ವಜನಿಕರು ಎಚ್ಚೆತ್ತುಕೊಳ್ಳದೇ ಇದ್ರೆ ಈ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯವಿಲ್ಲ.
ಇದೀಗ ಯುನೈಟೆಡ್ ಅರಬ್ ಎಮಿರೇಟ್ಸ್, ಪ್ಲಾಸ್ಟಿಕ್ ಮುಕ್ತ ರಾಷ್ಟ್ರ ನಿರ್ಮಾಣಕ್ಕಾಗಿ ಹೊಸದೊಂದು ಆಕರ್ಷಕ ಆಫರ್ ಅನ್ನು ಬಿಡುಗಡೆ ಮಾಡಿದೆ. ಜನರು ಖಾಲಿ ಪ್ಲಾಸ್ಟಿಕ್ ಬಾಟಲಿ ತಂದರೆ ಇಲ್ಲಿನ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಟಿಕೆಟ್ ಇಲ್ಲದೆ ಉಚಿತವಾಗಿ ಪ್ರಯಾಣ ಮಾಡಬಹುದು. ಅಬುಧಾಬಿಯಲ್ಲಿರುವ ಪುರಸಭೆಗಳು ಮತ್ತು ಸಾರಿಗೆ ಇಲಾಖೆಯ ಇಂಟಿಗ್ರೇಟೆಡ್ ಟ್ರಾನ್ಸ್‌ಪೋರ್ಟ್ ಸೆಂಟರ್ ಜಂಟಿಯಾಗಿ ಈ ಘೋಷಣೆಯನ್ನು ಹೊರಡಿಸಿವೆ.
ಪ್ರಯಾಣಿಕರು ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಹೆಕ್ಕಿ ತರಬೇಕು. ಪ್ರತಿ ಖಾಲಿ ಪ್ಲಾಸ್ಟಿಕ್ ಬಾಟಲಿಗೆ ಅಂಕಗಳನ್ನು ನೀಡಲಾಗುವುದು. ಈ ಅಂಕಗಳನ್ನೇ ಜನರು ಬಸ್ ಗಳಲ್ಲಿ ಶುಲ್ಕವಾಗಿ ಬಳಸಬಹುದು. ಹೆಚ್ಹೆಚ್ಚು ಬಾಟಲಿಗಳನ್ನು ತಂದರೆ ಹೆಚ್ಚು ಅಂಕ ದೊರೆಯುತ್ತದೆ. ಈ ಯೋಜನೆಗೆ ‘ಪಾಯಿಂಟ್ಸ್ ಫಾರ್ ಪ್ಲಾಸ್ಟಿಕ್: ದಿ ಬಸ್ ಟ್ಯಾರಿಫ್’ ಎಂದು ಹೆಸರಿಸಲಾಗಿದೆ.
ಅಬುಧಾಬಿಯ ಪ್ರಮುಖ ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಠೇವಣಿ ಯಂತ್ರವನ್ನು ಸ್ಥಾಪಿಸಲಾಗ್ತಿದೆ. ಇದರಲ್ಲಿ ಪ್ರಯಾಣಿಕರು ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಹಾಕಬೇಕು. ಸಣ್ಣ ಬಾಟಲ್ ಹಾಕಿದರೆ (600 ಮಿಲಿ ಅಥವಾ ಅದಕ್ಕಿಂತ ಕಡಿಮೆ) 1 ಪಾಯಿಂಟ್ ಸಿಗುತ್ತದೆ. ದೊಡ್ಡ ಪ್ಲಾಸ್ಟಿಕ್ ಬಾಟಲಿಗಳಿಗೆ 2 ಅಂಕ ನೀಡಲಾಗುತ್ತದೆ. ಇಂತಹ 10 ಅಂಕಗಳು 1 ದಿರ್ಹಮ್ ಗೆ ಸರಿಸಮವೆಂದು ಪರಿಗಣಿಸಲಾಗುತ್ತದೆ. ಹಂತಹಂತವಾಗಿ ಈ ಯೋಜನೆಯನ್ನು ಬೇರೆ ನಗರಗಳಿಗೂ ವಿಸ್ತರಿಸಲು ಯೋಜನೆ ಹಾಕಿಕೊಳ್ಳಲಾಗಿದೆ.