ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವೇ ಇಲ್ಲದಿದ್ದರೂ ನೀವು 10 ಸಾವಿರ ರೂಪಾಯಿವರೆಗೂ ವಿತ್‌ಡ್ರಾ ಮಾಡಬಹುದು. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ ಇಂಥದ್ದೊಂದು ಅವಕಾಶವಿದೆ. ಇದಲ್ಲದೇ ಖಾತೆದಾರರಿಗೆ ಹತ್ತಾರು ಸೌಲಭ್ಯಗಳಿವೆ. ಈ ಖಾತೆಯನ್ನು ಹೇಗೆ ತೆರೆಯಬಹುದು ? ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ನೋಡೋಣ.
2014ರಲ್ಲಿ ಪ್ರಧಾನಿ ಹುದ್ದೆಗೇರಿದಾಗ ನರೇಂದ್ರ ಮೋದಿ ಅವರು ಜನ್ ಧನ್ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಆಗಸ್ಟ್ 28 ರಂದು ಈ ಯೋಜನೆಗೆ ಚಾಲನೆ ಸಿಕ್ಕಿತ್ತು. ಈವರೆಗೆ 42 ಕೋಟಿಗೂ ಅಧಿಕ ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ.
ಯೋಜನೆಯ ಯಶಸ್ಸನ್ನು ಗಮನಿಸಿದ ಕೇಂದ್ರ ಸರ್ಕಾರ, ಇನ್ನಷ್ಟು ವೈಶಿಷ್ಟ್ಯಗಳೊಂದಿಗೆ ಎರಡನೇ ಆವೃತ್ತಿಯನ್ನು 2018 ರಲ್ಲಿ ಪ್ರಾರಂಭಿಸಿತು. 10 ವರ್ಷದೊಳಗಿನ ಮಕ್ಕಳ ಹೆಸರಲ್ಲೂ ಜನ್‌ಧನ್ ಖಾತೆ ತೆರೆಯಬಹುದು. ಇದರ ಅಡಿಯಲ್ಲಿ ನೀವು ರುಪೇ ಎಟಿಎಂ ಕಾರ್ಡ್, 2 ಲಕ್ಷ ರೂಪಾಯಿ ಅಪಘಾತ ವಿಮೆ, 30 ಸಾವಿರ ರೂಪಾಯಿವರೆಗೆ ಜೀವ ವಿಮೆ ಮತ್ತು ಠೇವಣಿ ಮೊತ್ತದ ಮೇಲಿನ ಬಡ್ಡಿಯನ್ನು ಪಡೆಯಲು ಅವಕಾಶವಿದೆ. ಅಷ್ಟೇ ಅಲ್ಲ ಜನ್‌ಧನ್ ಖಾತೆ ಹೊಂದಿದ್ದರೆ ಅದರ ಮೇಲೆ ನೀವು 10 ಸಾವಿರ ಓವರ್‌ಡ್ರಾಫ್ಟ್ ಸೌಲಭ್ಯವನ್ನೂ ಪಡೆಯುತ್ತೀರಿ. ಈ ಖಾತೆಯನ್ನು ಯಾವುದೇ ಬ್ಯಾಂಕಿನಲ್ಲಿ ತೆರೆಯಬಹುದು.
ಇದರಲ್ಲಿ ನೀವು ಕನಿಷ್ಟ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಾಗಿಲ್ಲ. ಜನ್‌ಧನ್ ಖಾತೆ ತೆರೆಯಲು ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಕೆವೈಸಿ ಕೂಡ ಕಡ್ಡಾಯ. ಈ ದಾಖಲೆಗಳು ನಿಮ್ಮ ಬಳಿ ಇಲ್ಲದೇ ಹೋದಲ್ಲಿ ಸ್ಮಾಲ್ ಅಕೌಂಟ್ ತೆರೆಯಬಹುದು. ಇದಕ್ಕಾಗಿ ಸ್ವಯಂ ದೃಢೀಕರಿಸಿದ ಭಾವಚಿತ್ರ ಮತ್ತು ನಿಮ್ಮ ಸಹಿಯನ್ನು ಬ್ಯಾಂಕ್ ಅಧಿಕಾರಿಗೆ ನೀಡಬೇಕು. ಜನ್ ಧನ್ ಖಾತೆಯನ್ನು ತೆರೆಯಲು ನೀವು ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಕಾಗಿಲ್ಲ.