ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆಯವರು ಆಯ್ಕೆಯಾಗಿದ್ದು, ಬುಧವಾರದಂದು ಅವರು ಅಧಿಕಾರ ಸ್ವೀಕರಿಸಿದ್ದಾರೆ. ಖರ್ಗೆಯವರು ಅಧ್ಯಕ್ಷರಾಗುತ್ತಿದ್ದಂತೆ ಕೆ.ಎಚ್. ಮುನಿಯಪ್ಪ ಅವರಿಗೆ ಅದೃಷ್ಟ ಖುಲಾಯಿಸಿದ್ದು, ಅವರನ್ನು ಸಂಚಲನ ಸಮಿತಿ ಸದಸ್ಯರನ್ನಾಗಿ ಮಾಡಲಾಗಿದೆ.
ಒಟ್ಟು 47 ಮಂದಿಯನ್ನು ಒಳಗೊಂಡಿರುವ ಈ ಸಂಚಲನಾ ಸಮಿತಿಯಲ್ಲಿ ಕೆ.ಎಚ್. ಮುನಿಯಪ್ಪ ಅವರಲ್ಲದೆ ಎಚ್.ಕೆ. ಪಾಟೀಲ್ ಮತ್ತು ದಿನೇಶ್ ಗುಂಡೂರಾವ್ ಅವರಿಗೂ ಅವಕಾಶ ಸಿಕ್ಕಿದ್ದು, ಈ ಉನ್ನತ ನೀತಿ ನಿರ್ಧಾರಕ ಸಮಿತಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಂತೆ ಕಾರ್ಯ ನಿರ್ವಹಿಸಲಿದೆ.
ಮಹತ್ವದ ಸಂಗತಿ ಎಂದರೆ ಕೋಲಾರ ಜಿಲ್ಲಾ ಕಾಂಗ್ರೆಸ್ ನಲ್ಲಿ ತಮ್ಮ ವಿರೋಧಿಗಳಿಗೆ ಮನ್ನಣೆ ನೀಡಲಾಗುತ್ತಿದೆ ಎಂಬ ಅಸಮಾಧಾನ ಹೊಂದಿದ್ದ ಮುನಿಯಪ್ಪನವರು, ಪಕ್ಷ ತೊರೆಯಲು ನಿರ್ಧರಿಸಿದ್ದರು ಎನ್ನಲಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಅವರು ಆರೋಗ್ಯ ಸಚಿವ ಸುಧಾಕರ್ ಅವರನ್ನು ಎರಡು ಬಾರಿ ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಯಾವಾಗ ಮಲ್ಲಿಕಾರ್ಜುನ ಖರ್ಗೆಯವರು ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತವಾಯಿತೋ ಆಗ ಕಾಂಗ್ರೆಸ್ ತೊರೆಯುವ ನಿರ್ಧಾರದಿಂದ ಹಿಂದೆ ಸರಿದ ಮುನಿಯಪ್ಪ ಅವರಿಗೆ ಈಗ ಪಕ್ಷದ ರಾಷ್ಟ್ರೀಯ ಸಮಿತಿಯಲ್ಲಿ ಪ್ರಮುಖ ಸ್ಥಾನ ಸಿಕ್ಕಿದೆ.