ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಟಿಕೆಟ್ ಘೋಷಣೆಯಾದ ಬಳಿಕ ಮೂರೂ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಮತ್ತೊಂದು ಮಹತ್ವದ ಸಂಗತಿ ಎಂದರೆ ಹೀಗೆ ಒಂದು ಪಕ್ಷ ತೊರೆದು ಬಂದವರಿಗೆ ಮರುದಿನವೇ ಮತ್ತೊಂದು ಪಕ್ಷದಲ್ಲಿ ಟಿಕೆಟ್ ಸಿಗುತ್ತಿದೆ.
ಬಿಜೆಪಿ ತೊರೆದು ಕಾಂಗ್ರೆಸ್ಸಿಗೆ ಬಂದಿರುವ ಲಕ್ಷ್ಮಣ ಸವದಿ ಅವರಿಗೆ ಅಥಣಿ ಕ್ಷೇತ್ರದ ಟಿಕೆಟ್ ಖಚಿತ ಎನ್ನಲಾಗಿದ್ದು, ಇದೇ ರೀತಿ ಬೇರೆ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಆಯ್ಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ತನ್ನ ಅಭ್ಯರ್ಥಿಗಳ ಎರಡು ಪಟ್ಟಿ ಪ್ರಕಟಿಸಿರುವ ಜೆಡಿಎಸ್ ಕೂಡ ಹೊರಗಿನಿಂದ ಬಂದವರಿಗೆ ಮಣೆ ಹಾಕುತ್ತಿದೆ.
ಮೂಡಿಗೆರೆ ಕ್ಷೇತ್ರದಲ್ಲಿ ಬಿ.ಬಿ. ನಿಂಗಯ್ಯ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದ ಜೆಡಿಎಸ್ ಇದೀಗ ಬಿಜೆಪಿ ತೊರೆದು ಶುಕ್ರವಾರದಂದು ಪಕ್ಷ ಸೇರ್ಪಡೆಯಾಗಿರುವ ಎಂ.ಪಿ. ಕುಮಾರಸ್ವಾಮಿಯವರಿಗೆ ಬಿ ಫಾರ್ಮ್ ನೀಡಲು ನಿರ್ಧರಿಸಿದೆ ಎಂದು ಹೇಳಲಾಗಿದೆ.
ಇದೇ ರೀತಿ ಕಡೂರು ಕ್ಷೇತ್ರದಲ್ಲಿ ಧನಂಜಯ ಅವರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿದ್ದು, ಇದೀಗ ಕಾಂಗ್ರೆಸ್ ಪಕ್ಷದಲ್ಲಿ ತಮಗೆ ಸ್ಪರ್ಧೆಗೆ ಅವಕಾಶ ಸಿಗದ ಕಾರಣ ವೈ.ಎಸ್.ವಿ. ದತ್ತ ಮರಳಿ ಪಕ್ಷಕ್ಕೆ ಮಂದಿರುವ ಕಾರಣ ಅವರಿಗೆ ಅವಕಾಶ ನೀಡಲಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಕೊನೆ ಕ್ಷಣದಲ್ಲಿ ಟಿಕೆಟ್ ಕಳೆದುಕೊಳ್ಳುತ್ತಿರುವ ಬಿ.ಬಿ. ನಿಂಗಯ್ಯ ಹಾಗೂ ಧನಂಜಯ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.