ಪಂಜಾಬ್‌ನ ಸಂಗ್ರೂರ್‌ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಆಕಳ ಕರುವೊಂದನ್ನು ಬಚಾವ್ ಮಾಡಲು ಹೋಗಿ ತಂದೆ, ಮಗ ಇಬ್ಬರೂ ದುರ್ಮರಣಕ್ಕೀಡಾಗಿದ್ದಾರೆ. ಮೃತ ವ್ಯಕ್ತಿ ಪೊಲೀಸ್ ಅಧಿಕಾರಿಯಾಗಿದ್ದ.
ಇತ್ತೀಚೆಗಷ್ಟೇ ಮಗಳನ್ನು ಮದುವೆ ಮಾಡಿ ಕೆನಡಾಕ್ಕೆ ಆತ ಕಳಿಸಿಕೊಟ್ಟಿದ್ದ. ಈಗ ತಂದೆ, ಮಗ ಇಬ್ಬರೂ ಮೃತಪಟ್ಟಿರುವುದರಿಂದ ಮನೆಯಲ್ಲಿ ಪೊಲೀಸ್ ಅಧಿಕಾರಿಯ ಪತ್ನಿ ಮಾತ್ರ ಉಳಿದುಕೊಂಡಿದ್ದಾರೆ. ತಂದೆ—ಮಗನ ಸಾವಿನಿಂದಾಗಿ ಇಡೀ ಊರಲ್ಲೇ ಸ್ಮಶಾನ ಮೌನ ಆವರಿಸಿದೆ.
ಇಡೀ ಕುಟುಂಬವನ್ನೇ ಸರ್ವನಾಶ ಮಾಡಲು ವಿಧಿ ಕಾಯುತ್ತಿದೆ ಎಂಬ ಕಲ್ಪನೆ ಯಾರಿಗೂ ಇರಲಿಲ್ಲ. ಆಕಳ ಕರುವೊಂದು ವಿದ್ಯುತ್ ಸ್ಪರ್ಷಕ್ಕೀಡಾಗಿ ಸಾಯುವ ಹಂತದಲ್ಲಿತ್ತು. ಇದನ್ನು ನೋಡಿದ ಮಗ ಕೂಡಲೇ ಅದನ್ನು ಬಚಾವ್ ಮಾಡಲು ಹೋಗಿದ್ದಾನೆ.
ಅವನಿಗೂ ವಿದ್ಯುತ್ ತಗುಲಿ ಅಲ್ಲೇ ಅಂಟಿಕೊಂಡಿದ್ದಾನೆ. ಆದ್ರಿದು ತಂದೆ ಹೇಮರಾಜ್‌ಗೆ ಗೊತ್ತಾಗಲೇ ಇಲ್ಲ. ಕರು ಭಾರ ಇರುವುದರಿಂದ ಮಗನ ಬಳಿ ಅದನ್ನು ಮೇಲಕ್ಕೆ ಎಳೆಯಲು ಸಾಧ್ಯವಾಗುತ್ತಿಲ್ಲ ಎಂದುಕೊಂಡು ತಾನೂ ಸಹಾಯ ಮಾಡಲು ಹೋಗಿದ್ದಾರೆ. ಈ ವೇಳೆ ಅವರಿಗೂ ಕರೆಂಟ್ ತಗುಲಿದೆ.
ತಕ್ಷಣವೇ ಆಸ್ಪತ್ರೆಗೆ ತಲುಪಿಸುವ ವ್ಯವಸ್ಥೆ ಆಗಲೇ ಇಲ್ಲ. ಹಾಗಾಗಿ ವಿದ್ಯುತ್ ತಗುಲಿ ತಂದೆ – ಮಗ ಇಬ್ಬರೂ ಮೃತಪಟ್ಟಿದ್ದಾರೆ. ವೈರ್ ಕಟ್ ಮಾಡಿ ಆಸ್ಪತ್ರೆಗೆ ಕರೆದೊಯ್ದರೂ ಪ್ರಾಣ ಉಳಿಸಲಾಗಲಿಲ್ಲ. ಆಸ್ಪತ್ರೆಗೆ ಕರೆತಂದಾಗ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.