ಚಳಿಗಾಲ ಪ್ರಾರಂಭವಾಗ್ತಿದ್ದಂತೆ ಶೀತ, ಜ್ವರ, ಕೆಮ್ಮು ಇಂತಹ ಸಮಸ್ಯೆಗಳು ಶುರುವಾಗುತ್ತವೆ. ಮಕ್ಕಳ ಬಗ್ಗೆ ಚಳಿಗಾಲದಲ್ಲಿ ವಿಶೇಷ ಕಾಳಜಿ ವಹಿಸಬೇಕು. ಚಿಕ್ಕ ಮಕ್ಕಳು ಕೂಡ ಈ ಋತುವಿನಲ್ಲಿ ಹೆಚ್ಚು ಚಳಿಯನ್ನು ಅನುಭವಿಸುತ್ತಾರೆ.
ಈ ಋತುವಿನಲ್ಲಿ ಹವಾಮಾನ ಮತ್ತು ತಾಪಮಾನದಲ್ಲಿ ನಿರಂತರ ಏರಿಳಿತವಿರುತ್ತದೆ. ಅದಕ್ಕಾಗಿಯೇ ಮಕ್ಕಳ ಬಗ್ಗೆ ಗಮನ ಕೊಡುವುದು ಬಹಳ ಮುಖ್ಯ. ಚಳಿಗಾಲದಲ್ಲಿ ಚರ್ಮವು ತುಂಬಾ ಒಣಗುತ್ತದೆ, ಇದರಿಂದಾಗಿ ಮಕ್ಕಳಿಗೆ ಅಲರ್ಜಿ ಮತ್ತು ದದ್ದುಗಳು ಉಂಟಾಗುತ್ತವೆ. ತುರಿಕೆಯ ಸಮಸ್ಯೆಯೂ ಪ್ರಾರಂಭವಾಗುತ್ತದೆ.
ದಪ್ಪನೆಯ ಬಟ್ಟೆಗಳನ್ನು ಹಾಕಿದರೆ ಮಕ್ಕಳಿಗೆ ಉಸಿರುಗಟ್ಟಿದಂತಾಗಬಹದು. ಕೆಲವೊಂದು ನಿರ್ದಿಷ್ಟ ಸಲಹೆಗಳನ್ನು ಅನುಸರಿಸಿದ್ರೆ ಚಳಿಗಾಲದಲ್ಲಿಯೂ ಪುಟಾಣಿಗಳನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು. ಚಳಿಗಾಲದಲ್ಲಿ ಮಕ್ಕಳನ್ನು ಕಾಡುವ ಸಾಮಾನ್ಯ ಸಮಸ್ಯೆಗಳೆಂದರೆ ಶೀತ, ಕೆಮ್ಮು, ಮೂಗು ಕಟ್ಟಿಕೊಳ್ಳುವುದು, ಸೀನು, ತಲೆನೋವು, ಕೀಲು ನೋವು, ಜ್ವರ, ಮೈಕೈ ನೋವು, ವೈರಲ್ ಫೀವರ್, ಗಂಟಲು ಊತ ಹೀಗೆ ಹಲವು.
ಹಾಗಾಗಿ ಮಗುವನ್ನು ಕೋಣೆಯ ಕಿಟಕಿ ಬಳಿಯಲ್ಲಿ ಮಲಗಿಸಬೇಡಿ. ತಂಪಾದ ಗಾಳಿ ಬೀಸುವುದರಿಂದ ಮಗುವಿಗೆ ಸಮಸ್ಯೆ ಆಗಬಹುದು. ಹೊರಗಡೆ ಹೋಗುವಾಗ ಮಗುವಿಗೆ ಬೆಚ್ಚನೆಯ ಬಟ್ಟೆಗಳನ್ನು, ಸ್ವೆಟರ್‌ಗಳನ್ನು ತೊಡಿಸಿ. ಕಿವಿಗೆ ಮತ್ತು ತಲೆಗೆ ಗಾಳಿ ಸೋಕದಂತೆ ಮಂಕಿ ಕ್ಯಾಪ್ ಕೂಡ ಹಾಕಬಹುದು. ಮಗುವಿಗೆ ಚಳಿಗಾಲದಲ್ಲಿ ಬೆಚ್ಚನೆಯ ಆಹಾರವನ್ನೇ ತಿನ್ನಿಸಿ. ಮಲಗುವ ಮುನ್ನ ಅರಿಶಿನದ ಹಾಲನ್ನು ಕುಡಿಯಲು ಕೊಡಿ.
ಸಾಧ್ಯವಾದರೆ ಮಕ್ಕಳಿಗೆ ದಿನಕ್ಕೆ ಒಂದು ಮೊಟ್ಟೆಯನ್ನು ತಿನ್ನಿಸಿ. ಅನೇಕ ಮಕ್ಕಳಿಗೆ ಚಳಿಗಾಲದಲ್ಲಿ ಶೀತ ಮತ್ತು ಕೆಮ್ಮಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ತಿಂಗಳು ಕಳೆದರು ಕಡಿಮೆಯಾಗುವುದೇ ಇಲ್ಲ. ಹಾಗಿದ್ದಾಗ ಅದನ್ನು ಅಲಕ್ಷಿಸಬೇಡಿ.