ಹಣಕಾಸಿನ ಮುಗ್ಗಟ್ಟಿನ ಸಂದರ್ಭದಲ್ಲಿ ನಮಗೆ ನೆರವಿಗೆ ಬರುವುದು ಕ್ರೆಡಿಟ್ ಕಾರ್ಡ್. ಶಾಪಿಂಗ್‌ನಿಂದ ಹಿಡಿದು ದಿನಸಿಗಳ ಬಿಲ್ ಪಾವತಿ ಎಲ್ಲವನ್ನೂ ಕ್ರೆಡಿಟ್ ಕಾರ್ಡ್ ಮೂಲಕ ಮಾಡಬಹುದು. ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಮನೆ ಬಾಡಿಗೆಯನ್ನೂ ಪಾವತಿಸುವ ಅವಕಾಶ ಗ್ರಾಹಕರಿಗೆ ಸಿಕ್ತಾ ಇದೆ.
Paytm ಮತ್ತು Cred ಸೇರಿದಂತೆ ಅನೇಕ ಪ್ಲಾಟ್‌ಫಾರ್ಮ್‌ಗಳು ಬಳಕೆದಾರರಿಗೆ ತಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಮನೆ ಬಾಡಿಗೆಯನ್ನು ಪಾವತಿಸಲು ಅನುವು ಮಾಡಿಕೊಡುವ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿವೆ. ಈ ಸೇವೆಗಾಗಿ ಗ್ರಾಹಕರಿಗೆ ಶೇ.0.4 ರಿಂದ ಶೇ.2ರಷ್ಟು ಸೇವಾ ಶುಲ್ಕ ವಸೂಲಿ ಮಾಡುತ್ತವೆ.
ಸಂಬಳ ಪಡೆಯುವ ವರ್ಗಕ್ಕೆ ಮನೆ ಬಾಡಿಗೆ ಬಹಳ ದೊಡ್ಡ ಖರ್ಚು. ಕ್ರೆಡಿಟ್ ಕಾರ್ಡ್ ಹೊಂದಿರುವವರು ಈ ಕ್ರೆಡಿಟ್ ಟೂಲ್ ಅನ್ನು ಬಳಸಿಕೊಂಡು ಬಾಡಿಗೆಯನ್ನು ಪಾವತಿಸುತ್ತಾರೆ. ಏಕೆಂದರೆ ಇದು ತ್ವರಿತ ಪಾವತಿಯನ್ನು ಅನುಮತಿಸುತ್ತದೆ. ಕೆಲವರು ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಲು ತಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಮನೆ ಬಾಡಿಗೆಯನ್ನು ಪಾವತಿಸುತ್ತಿದ್ದರು.
ಆದರೆ ಬಳಕೆದಾರರು ಬಾಡಿಗೆಯನ್ನು ವಾಸ್ತವವಾಗಿ ಭೂಮಾಲೀಕರಿಗೆ ಪಾವತಿಸುತ್ತಿದ್ದಾರೆಯೇ ಹೊರತು ಅವರ ಸಂಬಂಧಿಕರು/ಸ್ನೇಹಿತರಿಗೆ ಅಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಯಾವುದೇ ಕಾರ್ಯವಿಧಾನವಿಲ್ಲ. ತಜ್ಞರ ಪ್ರಕಾರ ಕ್ರೆಡಿಟ್ ಕಾರ್ಡ್ ಬಳಸಿ ಮನೆ ಬಾಡಿಗೆ ಪಾವತಿಸುವುದು ಸೂಕ್ತವಲ್ಲ. ಬಾಡಿಗೆಯು ನಿಶ್ಚಿತ ವೆಚ್ಚವೇ ಹೊರತು ಹಠಾತ್ ಬರುವ ಖರ್ಚಲ್ಲ. ಇದು ಮಾಸಿಕ ಹಣಕಾಸು ಯೋಜನೆಯ ಭಾಗವಾಗಿರಬೇಕು.
ಕ್ರೆಡಿಟ್ ಕಾರ್ಡ್‌ಗಳ ಸರಿಯಾದ ಬಳಕೆಯನ್ನು ಅರ್ಥಮಾಡಿಕೊಂಡು ಅನಿರೀಕ್ಷಿತ ವೆಚ್ಚದ ಸಮಯದಲ್ಲಿ ಅವುಗಳನ್ನು ಬಳಸಬೇಕು. ರಿವಾರ್ಡ್ ಗಳಿಸುವ ಸಲುವಾಗಿ ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆಯನ್ನು ಪಾವತಿಸಬೇಡಿ ಎಂಬುದು ತಜ್ಞರ ಸಲಹೆ. ಬ್ಯಾಂಕ್‌ಗಳು ಈಗ ಸೇವೆಗೆ ಶುಲ್ಕ ವಿಧಿಸುವುದರಿಂದ, ನೀವು ಬಳಕೆಯ ಮೇಲೆ ಹೆಚ್ಚುವರಿ ಪಾವತಿಗಳನ್ನು ಮಾಡಬೇಕಾದಾಗ ಬಾಡಿಗೆ ಪಾವತಿಗಾಗಿ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವುದರಲ್ಲಿ ಯಾವುದೇ ಅರ್ಥವಿಲ್ಲ ಎನ್ನುತ್ತಾರೆ ಅವರು.
ಮನೆ ಬಾಡಿಗೆ ಪಾವತಿಗಳಿಗೆ ಕ್ರೆಡಿಟ್ ಕಾರ್ಡ್ ಬಳಸುವ ಮತ್ತೊಂದು ದೊಡ್ಡ ನ್ಯೂನತೆಯೆಂದರೆ, ನೀವು ನಿಗದಿತ ದಿನಾಂಕದೊಳಗೆ ಬಿಲ್ ಪಾವತಿಯನ್ನು ತಪ್ಪಿಸಿಕೊಂಡರೆ, ನಿಮ್ಮ ಕ್ರೆಡಿಟ್ ಸ್ಕೋರ್ಗೆ ಸಮಸ್ಯೆಯಾಗುತ್ತದೆ. ಮನೆ ಬಾಡಿಗೆಯು ದೊಡ್ಡ ವೆಚ್ಚವಾಗಿರುವುದರಿಂದ, ನೀವು ಇತರ ವೆಚ್ಚಗಳಿಗೆ ಕಾರ್ಡ್ ಅನ್ನು ಬಳಸಿದರೆ ಅದು ಹೆಚ್ಚಿನ ಕ್ರೆಡಿಟ್ ಬಳಕೆಯ ಅನುಪಾತಕ್ಕೆ ಕಾರಣವಾಗುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆಯ ಅನುಪಾತವು ನಿಗದಿತ ಕ್ರೆಡಿಟ್ ಮಿತಿಯ ಶೇ.30ಕ್ಕಿಂತ ಹೆಚ್ಚಿದ್ದರೆ, ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ಕುಸಿಯುತ್ತದೆ. ಹೀಗಾಗಿ ನಿಮ್ಮ ತಿಂಗಳ ಬಜೆಟ್ ಅನ್ನು ಅಚ್ಚುಕಟ್ಟಾಗಿ ಯೋಜಿಸುವುದು ಮತ್ತು ನಿಮ್ಮ ಸಂಬಳ ಅಥವಾ ಆದಾಯದಿಂದ ಮನೆ ಬಾಡಿಗೆಗೆ ಹಣ ನೀಡುವುದು ಉತ್ತಮ.