ಟಾಟಾ ನೆಕ್ಸಾನ್ ಹಾಗೂ ಹುಂಡೈ ಕ್ರೆಟಾ, ಭಾರತದ ಎಸ್‌ಯುವಿ ಮಾರುಕಟ್ಟೆಯನ್ನು ಆಳುತ್ತಿದ್ದವು. ಆದ್ರೀಗ ಈ ಎರಡೂ ವಾಹನಗಳನ್ನು ಮಾರುತಿ ಬ್ರೆಝಾ ಹಿಂದಿಕ್ಕಿದೆ. ಮಾರ್ಚ್ ತಿಂಗಳಲ್ಲಿ ಮಾರುತಿ ಬ್ರೆಝಾ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿ ಎನಿಸಿಕೊಂಡಿದೆ. ಫೆಬ್ರವರಿಯಲ್ಲೂ ಬ್ರೆಝಾ ಮಾರಾಟ ಜೋರಾಗಿಯೇ ಇತ್ತು. ಸತತ ಎರಡು ತಿಂಗಳುಗಳ ಕಾಲ ಬ್ರೆಝಾ ನಂಬರ್ ವನ್ ಸ್ಥಾನದಲ್ಲಿದೆ.
ಮಾರ್ಚ್‌ನಲ್ಲಿ 2023 ಬ್ರೆಝಾದ 16,227 ಯುನಿಟ್‌ಗಳು ಮಾರಾಟವಾಗಿದ್ದರೆ, ಫೆಬ್ರವರಿಯಲ್ಲಿ 15,787 ಯುನಿಟ್‌ಗಳು ಬಿಕರಿಯಾಗಿವೆ. ಮಾರುತಿ ಬ್ರೆಝಾದ ಆರಂಭಿಕ ಬೆಲೆ 8.27 ಲಕ್ಷ ರೂಪಾಯಿ. ಪ್ರೀಮಿಯಂ ಮಾದರಿಗೆ 14.13 ಲಕ್ಷ ರೂಪಾಯಿ ವರೆಗೂ ಇದೆ. ಅತಿ ಹೆಚ್ಚು ಮಾರಾಟವಾದ ಇತರೆ SUVಗಳೆಂದರೆ, ಬ್ರೆಝಾ ನಂತರದ ಸ್ಥಾನದಲ್ಲಿ ಟಾಟಾ ನೆಕ್ಸಾನ್ ಇದೆ. ಹುಂಡೈ ಕ್ರೆಟಾ ಮೂರನೇ ಸ್ಥಾನದಲ್ಲಿದ್ದರೆ, ಟಾಟಾ ಪಂಚ್ ನಾಲ್ಕನೇ ಸ್ಥಾನ ಪಡೆದಿದೆ. ಮಾರುತಿ ಗ್ರ್ಯಾಂಡ್ ವಿಟಾರಾ ಐದನೇ ಸ್ಥಾನದಲ್ಲಿದೆ.
ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಟಾಟಾ ನೆಕ್ಸಾನ್ ಮಾರ್ಚ್ 2023 ರಲ್ಲಿ ಒಟ್ಟು 14,769 ಯುನಿಟ್‌ಗಳನ್ನು ಮಾರಾಟ ಮಾಡಿದೆ, ಫೆಬ್ರವರಿಯಲ್ಲಿ 14,518 ವಾಹನಗಳು ಸೇಲ್ ಆಗಿವೆ. ಹುಂಡೈ ಕ್ರೆಟಾ, ಮಾರ್ಚ್‌ನಲ್ಲಿ 14,026 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಫೆಬ್ರವರಿಯಲ್ಲಿ 12,866 ಯುನಿಟ್‌ಗಳನ್ನು ಮಾರಾಟವಾಗಿದ್ದವು. ಮೈಕ್ರೋ ಎಸ್‌ಯುವಿ ಟಾಟಾ ಪಂಚ್ ಎಸ್‌ಯುವಿ ವಿಭಾಗದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮಾರ್ಚ್ನಲ್ಲಿ ಒಟ್ಟು 10,894 ಟಾಟಾ ಪಂಚ್ ಮಾರಾಟವಾಗಿವೆ. ಫೆಬ್ರವರಿಯಲ್ಲಿ ಒಟ್ಟು 9,592 ಯುನಿಟ್‌ಗಳು ಮಾರಾಟವಾಗಿದ್ದವು. ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಒಟ್ಟು 10,045 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.