
ಮಹಿಳೆಯೊಬ್ಬರು ಕ್ರಿಕೆಟ್ ಬ್ಯಾಟ್‌ನಿಂದ ಪತಿಯನ್ನು ಥಳಿಸಿರುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ವರದಿಯಾಗಿದೆ. ಶಾಲೆಯ ಪ್ರಾಂಶುಪಾಲರಾಗಿರುವ ವ್ಯಕ್ತಿಯು, ತನ್ನ ಪತ್ನಿಯ ದೈಹಿಕ ಮತ್ತು ಮಾನಸಿಕ ಕಿರುಕುಳದಿಂದ ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಪತ್ನಿಯಿಂದ ದೌರ್ಜನ್ಯಕ್ಕೊಳಗಾಗಿರುವ ಪ್ರಾಂಶುಪಾಲ ಅಜಿತ್ ಸಿಂಗ್ ಯಾದವ್ ನೀಡಿರುವ ದೂರಿನ ಪ್ರಕಾರ, ಪತ್ನಿ ತನ್ನ ಮೇಲೆ ಪ್ಯಾನ್, ಸ್ಟಿಕ್ ಮತ್ತು ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ಇದಕ್ಕಾಗಿ ಸಾಕ್ಷ್ಯ ಸಂಗ್ರಹಿಸಲು ಅವರು ತಮ್ಮ ಮನೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ತಮ್ಮ ಮಗ ನೋಡುತ್ತಿದ್ದಂತೆ ಮಹಿಳೆಯು ಪ್ರಾಂಶುಪಾಲರಾಗಿರುವ ತನ್ನ ಪತಿಯನ್ನು ಕ್ರಿಕೆಟ್ ಬ್ಯಾಟ್‌ನಿಂದ ಹೊಡೆಯುತ್ತಿರುವುದನ್ನು ಕಾಣಬಹುದು.
ಪತ್ನಿಯಿಂದ ರಕ್ಷಣೆ ನೀಡುವಂತೆ ಪತಿ ನ್ಯಾಯಾಲಯದ ಮೊರೆ ಹೋಗಿದ್ದು, ಘಟನೆಯ ದೃಶ್ಯಾವಳಿಗಳನ್ನು ಹಾಜರುಪಡಿಸಿದ್ದಾರೆ. ಈ ಸಂಬಂಧ ದೌರ್ಜನ್ಯಕ್ಕೊಳಪಟ್ಟ ಪತಿಗೆ ಭದ್ರತೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಅಂದಹಾಗೆ, ಪ್ರಾಂಶುಪಾಲರಾದ ಅಜಿತ್ ಸಿಂಗ್ ಯಾದವ್ ಅವರು ಏಳು ವರ್ಷಗಳ ಹಿಂದೆ ಹರಿಯಾಣದ ಸೋನಿಪತ್ ನಿವಾಸಿ ಸುಮನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿ, ಅವರ ಸಂಸಾರ ಸುಖಮಯವಾಗಿ ಸಾಗಿತ್ತು. ಆದರೆ, ಸ್ವಲ್ಪ ಸಮಯದ ನಂತರ ಹಿಂಸಾಚಾರ ಶುರುವಾಗಿದೆ. ಪತ್ನಿಯಿಂದ ಹಲವಾರು ಬಾರಿ ದೈಹಿಕ ಹಾಗೂ ಮಾನಸಿಕವಾಗಿ ದೌರ್ಜನ್ಯಕ್ಕೊಳಗಾಗಿದ್ದಾಗಿ ಅವರು ಆರೋಪಿಸಿದ್ದಾರೆ.
ಶಿಕ್ಷಕರ ವೃತ್ತಿಯ ಘನತೆಯನ್ನು ಗಮನದಲ್ಲಿಟ್ಟುಕೊಂಡು ಹಿಂಸೆಯನ್ನು ಸಹಿಸಿಕೊಳ್ಳುತ್ತಿದ್ದಾಗಿ ಸಿಂಗ್ ಹೇಳಿದ್ದಾರೆ. ಆದರೆ, ಈಗ ತನ್ನ ಹೆಂಡತಿ ಎಲ್ಲಾ ಮಿತಿಗಳನ್ನು ಮೀರಿದ್ದರಿಂದ ತಾನು ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂದು ತಿಳಿಸಿದ್ದಾರೆ.