ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಸದ್ಯ ಮೈದಾನದಿಂದ ದೂರ ಉಳಿದಿದ್ದಾರೆ. 2022ರ ಟಿ20 ವಿಶ್ವಕಪ್ ಬಳಿಕ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇತ್ತ ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ಇದರ ನಡುವೆಯೇ ವಿರಾಟ್ ಕೊಹ್ಲಿ ನಿವೃತ್ತಿ ಸುದ್ದಿ ವೈರಲ್ ಆಗ್ತಿದೆ. ಕೊಹ್ಲಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಡಿರುವ ಪೋಸ್ಟ್ ಒಂದು ನಿವೃತ್ತಿಯ ಸೂಚನೆ ನೀಡ್ತಾ ಇದೆ. ಈ ಪೋಸ್ಟ್ ಅಭಿಮಾನಿಗಳಲ್ಲಿ ತಲ್ಲಣ ಮೂಡಿಸಿದೆ.
2022ರ ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಆಡಿದ ಇನ್ನಿಂಗ್ಸ್ ಅತ್ಯಂತ ವಿಶೇಷವಾದದ್ದು ಎಂದು ವಿರಾಟ್ ಕೊಹ್ಲಿ ಬಣ್ಣಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಫೋಟೋವನ್ನು ಹಂಚಿಕೊಂಡ ವಿರಾಟ್, 23 ಅಕ್ಟೋಬರ್ 2022, ಅತ್ಯಂತ ವಿಶೇಷವೆಂದು ಬಣ್ಣಿಸಿದ್ದಾರೆ. ’23 ಅಕ್ಟೋಬರ್ 2022 ಯಾವಾಗಲೂ ನನ್ನ ಹೃದಯದಲ್ಲಿ ವಿಶೇಷ ದಿನವಾಗಿರುತ್ತದೆ. ಇಂತಹ ಶಕ್ತಿ ಕ್ರಿಕೆಟ್ ಆಟದಲ್ಲಿ ಹಿಂದೆಂದೂ ಕಂಡಿರಲಿಲ್ಲ.
ಅದು ಎಷ್ಟು ಸುಂದರವಾದ ಸಂಜೆʼ ಎಂದು ಕೊಹ್ಲಿ ಬರೆದಿದ್ದಾರೆ. ಈ ಫೋಟೋದಲ್ಲಿ ಕೊಹ್ಲಿ ಮೈದಾನದಿಂದ ಪೆವಿಲಿಯನ್ಗೆ ಹಿಂತಿರುಗುತ್ತಿರುವುದನ್ನು ಕಾಣಬಹುದು. ವಿರಾಟ್ ಅವರ ಈ ಪೋಸ್ಟ್ ನೋಡಿದವರೆಲ್ಲ ಬಹುಷಃ ಅವರು ನಿವೃತ್ತಿಯ ಸೂಚನೆ ಕೊಟ್ಟಿರಬಹುದು ಎಂಬ ಆತಂಕ ಹೊರಹಾಕಿದ್ದಾರೆ. ಈ ಪೋಸ್ಟ್ ಬಳಿಕ ಟ್ವೀಟ್ಗಳ ಮಹಾಪೂರವೇ ಹರಿದುಬಂದಿದೆ. ಕೊಹ್ಲಿ ಪೋಸ್ಟ್ಗೆ ಪ್ರತಿಕ್ರಿಯಿಸಿದ ಬಳಕೆದಾರರು, ‘ದಯವಿಟ್ಟು 2027 ರ ಮೊದಲು ನಿವೃತ್ತರಾಗಬೇಡಿʼ ಎಂದೆಲ್ಲ ಬೇಡಿಕೊಳ್ತಿದ್ದಾರೆ.
ಕೊಹ್ಲಿ ಪೋಸ್ಟ್ನಿಂದ ಹೃದಯ ಅರೆಕ್ಷಣ ಹೃದಯಬಡಿತವೇ ನಿಂತಂತಾಯ್ತು ಎಂದು ತಮ್ಮ ಆತಂಕವನ್ನು ಹೊರಹಾಕಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 82 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಈ ಪಂದ್ಯದಲ್ಲಿ 160 ರನ್ ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ, 31 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಅದ್ಭುತ ಬ್ಯಾಟಿಂಗ್ ಮಾಡಿದ ಕೊಹ್ಲಿ ಟೀಂ ಇಂಡಿಯಾವನ್ನು ಗೆಲ್ಲಿಸಿದ್ದರು.