ಇಡ್ಲಿ ದೋಸೆ ಮಾಡಿದಾಗ ಚಟ್ನಿ ಇಲ್ಲದೇ ಕೆಲವರಿಗೆ ಇದು ಸೇರಲ್ಲ. ಹಾಗಂತ ದಿನಾ ಕಾಯಿ ಚಟ್ನಿ ಮಾಡಿಕೊಂಡು ತಿಂದು ಬೇಜಾರು ಎಂದವರು ಒಮ್ಮೆ ಈ ಕ್ಯಾರೆಟ್ ಚಟ್ನಿ ಮಾಡುವುದನ್ನು ಟ್ರೈ ಮಾಡಿ. ಆರೋಗ್ಯಕರವಾಗಿಯೂ ಇರುತ್ತದೆ.
ಬೇಕಾಗುವ ಸಾಮಗ್ರಿಗಳು:
½ ಕಪ್ – ಕ್ಯಾರೆಟ್ ತುರಿ, ¼ ಕಪ್ ತೆಂಗಿನಕಾಯಿ ತುರಿ, ಈರುಳ್ಳಿ – ಅರ್ಧ, 2 ಹಸಿಮೆಣಸು, ಅರ್ಧ ಇಂಚು – ಶುಂಠಿ, ಕಡಲೆಬೇಳೆ – 1/2 ಟೇಬಲ್ ಸ್ಪೂನ್, ¼ ಟೀ ಸ್ಪೂನ್ – ಜೀರಿಗೆ, ಹುಣಸೆಹಣ್ಣಿನ ಪೇಸ್ಟ್ – 1 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಇಂಗು – ಚಿಟಿಕೆ, ಕರಿಬೇವು – 5 ಎಸಳು, ಸಾಸಿವೆ – 1/4 ಟೀ ಸ್ಪೂನ್, ಎಣ್ಣೆ-1 ಚಮಚ.
ಮಾಡುವ ವಿಧಾನ:
ಮೊದಲಿಗೆ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಸೇರಿಸಿ ಕಡಲೆಬೇಳೆ ಹುರಿದು ಎತ್ತಿಟ್ಟುಕೊಳ್ಳಿ. ನಂತರ ಅದಕ್ಕೆ ಹಸಿಮೆಣಸು, ಈರುಳ್ಳಿ ಸೇರಿಸಿ. ಇದು ತುಸು ಕೆಂಪಾಗುತ್ತಲೆ ಅದಕ್ಕೆ ಜೀರಿಗೆ, ಕ್ಯಾರೆಟ್ ತುರಿ, ಶುಂಠಿ ಸೇರಿಸಿ ಸ್ವಲ್ಪ ಬೇಯುವವರಗೆ ಫ್ರೈ ಮಾಡಿ ಗ್ಯಾಸ್ ಆಫ್ ಮಾಡಿ. ಇದು ತಣ್ಣಗಾಗುವುದಕ್ಕೆ ಬಿಟ್ಟುಬಿಡಿ. ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ ಉಪ್ಪು, ಹುಣಸೆಹಣ್ಣಿನ ರಸ ಸೇರಿಸಿ ರುಬ್ಬಿಕೊಳ್ಳಿ.
ಒಗ್ಗರಣೆ ಪಾತ್ರೆಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಎಣ್ಣೆ, ಸಾಸಿವೆ, ಇಂಗು, ಕರಿಬೇವು ಹಾಕಿ ಈ ಒಗ್ಗರಣೆಯನ್ನು ಚಟ್ನಿಗೆ ಹಾಕಿ. ಬಿಸಿ ಅನ್ನದ ಜೊತೆ ಇದು ಚೆನ್ನಾಗಿರುತ್ತದೆ.