ಕ್ಯಾಪ್ಟನ್ ಮೋನಿಕಾ ಖನ್ನಾ, 185 ಪ್ರಯಾಣಿಕರ ಜೀವ ಉಳಿಸಿದ ಸಾಹಸಿ ಪೈಲಟ್. ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡು ಆತಂಕ ಮೂಡಿಸಿದ್ದ ಪಾಟ್ನಾ-ದೆಹಲಿ ಸ್ಪೈಸ್ ಜೆಟ್ ಬೋಯಿಂಗ್ 737 ವಿಮಾನದ ಪೈಲಟ್ ಆಗಿದ್ದವರು ಇದೇ ಮೋನಿಕಾ ಖನ್ನಾ.
185 ಪ್ರಯಾಣಿಕರನ್ನು ಹೊತ್ತು ದೆಹಲಿಗೆ ಹೊರಟಿದ್ದ ಈ ವಿಮಾನದಲ್ಲಿ ಪಾಟ್ನಾದಿಂದ ಟೇಕಾಫ್ ಆದ ಕೆಲ ಹೊತ್ತಿನಲ್ಲೇ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಪಾಟ್ನಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಷ ಮಾಡಲಾಯ್ತು. ಮೋನಿಕಾ ಖನ್ನಾ ಅವರ ಸಮಯೋಚಿತ ನಿರ್ಧಾರ ಮತ್ತು ಧೈರ್ಯದಿಂದಾಗಿ 185 ಮಂದಿಯ ಜೀವ ಉಳಿದಿದೆ.
ಈ ವಿಮಾನದಲ್ಲಿ ಕ್ಯಾಪ್ಟನ್ ಮೋನಿಕಾ ಖನ್ನಾ, ಪೈಲಟ್ ಇನ್ ಕಮಾಂಡ್ ಆಗಿದ್ದರು. ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಗ್ತಿದ್ದಂತೆ ಆ ಎಂಜಿನ್ ಅನ್ನು ಮೋನಿಕಾ ಆಫ್ ಮಾಡಿದ್ದಾರೆ. ತುರ್ತು ಲ್ಯಾಂಡಿಂಗ್ ಮೂಲಕ ವಿಮಾನವನ್ನು ಕೆಳಕ್ಕಿಳಿಸಿದ್ದಾರೆ. ಸ್ಪೈಸ್‌ಜೆಟ್ ಬೋಯಿಂಗ್ 737 ವಿಮಾನದ ಎಡ ಭಾಗದಲ್ಲಿರುವ ಎಂಜಿನ್‌ನಿಂದ ಬೆಂಕಿಯ ಕಿಡಿಗಳು ಹೊರಬರುತ್ತಿರುವುದು ಕಾಣಿಸುತ್ತಿತ್ತು. ಸ್ಥಳೀಯರು ಇದನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ಬೆಂಕಿ ಕಾಣಿಸಿಕೊಂಡಿರೋದು ಗೊತ್ತಾಗ್ತಿದ್ದಂತೆ ಕ್ಯಾಪ್ಟನ್ ಮೋನಿಕಾ ಖನ್ನಾ ಮತ್ತು ಫಸ್ಟ್ ಆಫೀಸರ್ ಬಲ್ಪ್ರೀತ್ ಸಿಂಗ್ ಭಾಟಿಯಾ ಗಾಬರಿಯಾಗಲಿಲ್ಲ. ಬದಲಾಗಿ ಪರಿಸ್ಥಿತಿಯನ್ನು ಧೈರ್ಯದಿಂದ ನಿಭಾಯಿಸಿದ್ದಾರೆ. ಪ್ರಯಾಣದುದ್ದಕ್ಕೂ ಶಾಂತರಾಗಿದ್ದ ಮೋನಿಕಾ, ಪ್ರಯಾಣಿಕರ ಪ್ರಾಣ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಅನುಭವಿ ಅಧಿಕಾರಿಗಳು ಮತ್ತು ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ಸ್ಪೈಸ್ ಜೆಟ್ ಮುಖ್ಯಸ್ಥ ಗುರುಚರಣ್ ಅರೋರಾ ಶ್ಲಾಘಿಸಿದ್ದಾರೆ.
ಹಕ್ಕಿಯೊಂದು ಡಿಕ್ಕಿ ಹೊಡೆದಿದ್ದರಿಂದ ಒಂದು ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡಿತು. ಎಟಿಸಿ ಜೊತೆ ಮಾತನಾಡಿದ ಕ್ಯಾಪ್ಟನ್ ಮೋನಿಕಾ ಖನ್ನಾ, ತಕ್ಷಣವೇ ವಿಮಾನದ ಎಡ ಎಂಜಿನ್ ಅನ್ನು ಸ್ಥಗಿತಗೊಳಿಸಿದ್ದಾರೆ. ಮಾನದಂಡಗಳ ಪ್ರಕಾರ ವಿಮಾನವು ಒಂದು ಸುತ್ತು ಸುತ್ತಿ ಹಿಂತಿರುಗಬೇಕಿತ್ತು, ಆದ್ರೆ ತುರ್ತು ಸಂದರ್ಭದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಂಡ ಮೋನಿಕಾ ಲ್ಯಾಂಡಿಂಗ್ ಮಾಡಿದ್ದಾರೆ. ಈ ವೇಳೆ ವಿಮಾನದ ಒಂದು ಇಂಜಿನ್ ಮಾತ್ರ ಕಾರ್ಯ ನಿರ್ವಹಿಸುತ್ತಿತ್ತು.
ವಿಮಾನ ರನ್‌ವೇ ಬಳಿ ಬರುವಷ್ಟರಲ್ಲಿ ಎಂಜಿನ್‌ನಲ್ಲಿದ್ದ ಬೆಂಕಿಯನ್ನು ನಂದಿಸಲಾಗಿತ್ತು. ಸುರಕ್ಷಿತ ಲ್ಯಾಂಡಿಂಗ್ ನಂತರ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು ಕ್ಯಾಪ್ಟನ್ ಮೋನಿಕಾ ಅವರನ್ನು ಚಪ್ಪಾಳೆಯೊಂದಿಗೆ ಸ್ವಾಗತಿಸಿದರು.
ಮೋನಿಕಾ ಖನ್ನಾ ಸ್ಪೈಸ್ ಜೆಟ್ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತ್ಯಂತ ಅನುಭವಿ ಪೈಲಟ್. ತಮ್ಮ ವೃತ್ತಿಯನ್ನು ಮೋನಿಕಾ ಎಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಅವರ ಇನ್‌ಸ್ಟಾಗ್ರಾಮ್‌ನ ಪೋಸ್ಟ್‌ಗಳೇ ಸಾಕ್ಷಿ. ತುರ್ತು ಸ್ಥಿತಿಯಲ್ಲಿ ಅವರು ಸ್ಪಂದಿಸಿದ ರೀತಿ, ಪ್ರಯಾಣಿಕರನ್ನು ಕಾಪಾಡಿದ ಧೈರ್ಯಕ್ಕೆ ಇಡೀ ದೇಶವೇ ಅವರನ್ನು ಕೊಂಡಾಡುತ್ತಿದೆ.