ಕ್ಯಾಡ್ಬರಿ ಚಾಕಲೇಟ್ ಪ್ರಿಯರಿಗೆ ಕಹಿ ಸುದ್ದಿಯೊಂದಿದೆ. ಲಿಸ್ಟೇರಿಯಾ ಭಯದಿಂದ ಬ್ರಿಟನ್‌ನಲ್ಲಿ ಸಾವಿರಾರು ಕ್ಯಾಡ್‌ಬರಿ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ. ಈ ಬ್ಯಾಚ್‌ಗಳಿಂದ ಕ್ಯಾಡ್‌ಬರಿ ಉತ್ಪನ್ನಗಳನ್ನು ಖರೀದಿಸಿದ ಜನರು ಅವುಗಳನ್ನು ತಿನ್ನದಂತೆ ಎಚ್ಚರಿಕೆ ನೀಡಲಾಗಿದೆ. ಉತ್ಪನ್ನಗಳನ್ನು ಹಿಂದಿರುಗಿಸಿ ಹಣ ಮರುಪಾವತಿ ಪಡೆಯುವಂತೆ ಕೂಡ ಸೂಚಿಸಲಾಗಿದೆ.
ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ (CDC) ಪ್ರಕಾರ, ಲಿಸ್ಟೇರಿಯಾ ಸೋಂಕು ಆಹಾರದಿಂದ ಹರಡುವ ಬ್ಯಾಕ್ಟೀರಿಯಾದ ಕಾಯಿಲೆಯಾಗಿದೆ. ಇದನ್ನು ಲಿಸ್ಟರಿಯೊಸಿಸ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಲಿಸ್ಟೇರಿಯಾ, ಮೊನೊಸೈಟೊಜೆನ್ಸ್‌ನೊಂದಿಗೆ ಕಲುಷಿತವಾಗಿರುವ ಆಹಾರವನ್ನು ತಿನ್ನುವುದರಿಂದ ಉಂಟಾಗುತ್ತದೆ.
ಬ್ಯಾಕ್ಟೀರಿಯಾಗಳು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ದಾಳಿ ಮಾಡುವುದರಿಂದ ಗರ್ಭಿಣಿಯರು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರು ಹೆಚ್ಚು ಅಪಾಯಕ್ಕೆ ತುತ್ತಾಗುತ್ತಾರೆ. ಬ್ರಿಟನ್‌ನ ಆಹಾರ ಗುಣಮಟ್ಟ ಸಂಸ್ಥೆ (FSA), ವೆಬ್‌ಸೈಟ್‌ನಲ್ಲಿ ಕ್ಯಾಡ್‌ಬರಿ ಉತ್ಪನ್ನಗಳ ಎಕ್ಸ್‌ಪೈರಿ ದಿನಾಂಕವನ್ನು ಪರಿಶೀಲಿಸುವಂತೆ ಸೂಚಿಸಿದೆ.
ಕ್ರಂಚಿ, ಡೈಮ್, ಫ್ಲೇಕ್, ಡೈರಿ ಮಿಲ್ಕ್ ಬಟನ್‌ಗಳು ಮತ್ತು ಡೈರಿ ಮಿಲ್ಕ್ ಚಂಕ್ಸ್ ಹೀಗೆ ಅನೇಕ ತಿನಿಸುಗಳನ್ನು ಸೇವನೆ ಮಾಡದಂತೆ ಎಚ್ಚರಿಸಲಾಗಿದೆ. ಇವೆಲ್ಲವನ್ನೂ ಸೂಪರ್‌ಮಾರ್ಕೆಟ್‌ಗಳಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ಕ್ರಂಚಿ ಮತ್ತು ಫ್ಲೇಕ್ ಸಿಹಿತಿಂಡಿಗಳನ್ನು ಮೇ 17 ಮತ್ತು ಉಳಿದವುಗಳನ್ನು ಮೇ 18ರೊಳಗೆ ಬಳಕೆ ಮಾಡುವಂತೆ ದಿನಾಂಕ ನಮೂದಿಸಲಾಗಿದೆ.
ಸೂಪರ್‌ಮಾರ್ಕೆಟ್ಗಳು ಈಗಾಗಲೇ ಚಾಕೊಲೇಟ್‌ಗಳ ಬ್ಯಾಚ್‌ಗಳನ್ನು ಮರುಪಡೆಯುತ್ತಿವೆ. ಲಿಸ್ಟರಿಯೊಸಿಸ್‌ನ ಲಕ್ಷಣಗಳು ಜ್ವರವನ್ನೇ ಹೋಲುತ್ತವೆ. ಜ್ವರ, ಸ್ನಾಯು ನೋವು ಅಥವಾ ನೋವು, ಶೀತ, ಅತಿಸಾರ ಹೀಗೆ ಅನೇಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸೋಂಕಿತ ವ್ಯಕ್ತಿ ಮತ್ತು ದೇಹದ ಭಾಗವನ್ನು ಅವಲಂಬಿಸಿ ಲಿಸ್ಟೇರಿಯಾ ಸೋಂಕಿನ ಚಿಹ್ನೆಗಳು ಮತ್ತು ಲಕ್ಷಣಗಳು ಬದಲಾಗುತ್ತವೆ ಎಂದು ಆರೋಗ್ಯ ಸಂಸ್ಥೆ ಹೇಳಿದೆ. ಅಪರೂಪದ ಸಂದರ್ಭಗಳಲ್ಲಿ ಈ ಸೋಂಕು ಹೆಚ್ಚು ತೀವ್ರವಾಗಿರುತ್ತದೆ. ಇದು ಮೆನಿಂಜೈಟಿಸ್‌ನಂತಹ ಗಂಭೀರ ತೊಡಕುಗಳನ್ನು ಉಂಟುಮಾಡುತ್ತದೆ. ಗರ್ಭಿಣಿಯರಿಗೆ ಲಿಸ್ಟರಿಯೊಸಿಸ್ ಬಂದರೆ ಗರ್ಭಪಾತದ ಅಪಾಯವಿದೆ.