ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ವಿದ್ಯಾರ್ಥಿಯೊಬ್ಬ ಸೋಮವಾರ ಕ್ಯಾಂಪಸ್ ಕಟ್ಟಡದ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಐಐಟಿಯ ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿ ಓದುತ್ತಿರುವ 26 ವರ್ಷದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಮೃತ ವಿದ್ಯಾರ್ಥಿ, ಸೋಮವಾರ ಮುಂಜಾನೆ 4.30ರ ಸುಮಾರಿಗೆ ಕ್ಯಾಂಪಸ್ ಕಟ್ಟಡದ ಏಳನೇ ಮಹಡಿಯಿಂದ ಜಿಗಿದಿದ್ದಾರೆ ಎನ್ನಲಾಗಿದೆ. ಅವರನ್ನ ಘಾಟ್‌ಕೋಪರ್‌ನ ರಾಜವಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ವಿದ್ಯಾರ್ಥಿಯನ್ನ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಖಾತರಿಪಡಿಸಿದರು.
ಇನ್ನು ಮೃತ ವಿದ್ಯಾರ್ಥಿಯ ಹಾಸ್ಟೆಲ್‌ನಿಂದ ಸೂಸೈಡ್ ನೋಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪತ್ರದಲ್ಲಿ ಆತ ತನ್ನ ಮಾನಸಿಕ ಖಿನ್ನತೆ ಬಗ್ಗೆ ಉಲ್ಲೇಖಿಸಿದ್ದು, ತಾನು ಖಿನ್ನತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ತನ್ನ ಸಾವಿಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪೊವಾಯಿ ಪೊಲೀಸರು ಆ್ಯಕ್ಸಿಡೆಂಟಲ್ ಡೆತ್ ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.