ಚಿಕ್ಕವರಿದ್ದಾಗ ಸಾಮಾನ್ಯವಾಗಿ ಎಲ್ಲರೂ ಕ್ಯಾಂಡಿ ತಿಂದಿರ್ತಾರೆ. ಅಮ್ಮನ ಬಳಿ ಹಠ ಮಾಡಿ ಕ್ಯಾಂಡಿ ಪಡೆದ ಸವಿ ನೆನಪುಗಳು ದೊಡ್ಡವರಾದ ಮೇಲೂ ಇರುತ್ತವೆ. ಕೆಲವರು ವಯಸ್ಸಿಗೆ ಬಂದ ಮೇಲೂ ಕ್ಯಾಂಡಿ ತಿನ್ನುವ ಅಭ್ಯಾಸ ಬಿಡುವುದಿಲ್ಲ. ನೀವು ಕೂಡ ಕ್ಯಾಂಡಿ ಪ್ರಿಯರಾಗಿದ್ದರೆ ಲಕ್ಷಾಂತರ ರೂಪಾಯಿ ಗಳಿಸುವ ಅವಕಾಶ ನಿಮಗಿದೆ.
ಕ್ಯಾಂಡಿ ಉತ್ಪಾದಿಸುವ ಕಂಪನಿಯೊಂದು ಅದ್ಭುತವಾದ ಆಫರ್ ಕೊಟ್ಟಿದೆ. ಕ್ಯಾಂಡಿ ಫನ್‌ಹೌಸ್ ಎಂದು ಇದರ ಹೆಸರು. ಈ ಕಂಪನಿ ಚಾಕಲೇಟ್, ಕ್ಯಾಂಡಿ ಹಾಗೂ ಮದ್ಯ ತಯಾರಿಸುತ್ತದೆ. ಈ ಕಂಪನಿಗೊಬ್ಬ ಅಧಿಕಾರಿಯ ಅವಶ್ಯಕತೆ ಇದೆಯಂತೆ. ಸಂಬಳ ಸುಮಾರು 61 ಲಕ್ಷ ರೂಪಾಯಿ. ಇಲ್ಲಿ ನೀವು ಮನೆಯಲ್ಲೇ ಕುಳಿತು ಕೆಲಸ ಮಾಡಬೇಕು. ವರ್ಕ್ ಫ್ರಮ್ ಹೋಮ್ ಸೌಲಭ್ಯ ನಿಮಗಿದೆ.
ಮನೆಯಲ್ಲೇ ಕುಳಿತು ಕ್ಯಾಂಡಿ ಪರೀಕ್ಷೆ ಮಾಡಿದ್ರೆ ಲಕ್ಷಾಂತರ ರೂಪಾಯಿ ಸಂಬಳ ಸಿಗುತ್ತದೆ. ಒಂಥರಾ ಮೋಜಿನ ಕೆಲಸ ಇದು. ಪೋಷಕರ ಅನುಮತಿಯೊಂದಿಗೆ ಐದು ವರ್ಷಕ್ಕಿಂತ ಮೇಲ್ಪಟ್ಟ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. ಸವಾಲಿನ ಕೆಲಸ ಏನಂದ್ರೆ ಒಂದೇ ದಿನದಲ್ಲಿ ಹಲವಾರು ಕ್ಯಾಂಡಿಗಳನ್ನು ಪರೀಕ್ಷಿಸಬೇಕು. ಕ್ಯಾಂಡಿ ಅಧಿಕಾರಿಯೊಬ್ಬರು ತಿಂಗಳಿಗೆ 3,500 ಮಿಠಾಯಿಗಳನ್ನು ತಿನ್ನಬೇಕಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಗಾಸಿಪ್ ಶುರುವಾಗಿತ್ತು.
ಆದ್ರೆ ಅದು ಸುಳ್ಳು ಎನ್ನುತ್ತಾರೆ ಕಂಪನಿಯ ಮುಖ್ಯಸ್ಥ ಜಮೀಲ್ ಹೆಜಾಜಿ. ಒಂದು ದಿನದಲ್ಲಿ ಕೇವಲ 117 ಕ್ಯಾಂಡಿಯ ಚೂರುಗಳನ್ನು ತಿಂದು ಪರೀಕ್ಷಿಸಬೇಕಾಗುತ್ತದೆ ಎಂದಿದ್ದಾರೆ. ಈ ಉದ್ಯೋಗದ ಆಫರ್ ಸಾಮಾಜಿಕ ತಾಣಗಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ವಯಸ್ಕರಲ್ಲದೆ, ಮಕ್ಕಳು ಸಹ ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.
ಅನೇಕ ಪೋಷಕರು ತಮ್ಮ ಮಕ್ಕಳು ಅರ್ಜಿ ಭರ್ತಿ ಮಾಡುವುದನ್ನು ಚಿತ್ರೀಕರಿಸಿ, ವಿಡಿಯೊಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಟೊರೊಂಟೊ ಮೂಲದ ಈ ಕಂಪನಿಯು Instagram ನಲ್ಲಿ ಸುಮಾರು 3,40,000 ಅನುಯಾಯಿಗಳನ್ನು ಮತ್ತು ಟಿಕ್‌ಟಾಕ್‌ನಲ್ಲಿ ಮೂರು ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದೆ.