ಬದಲಾದ ಕಾಲಕ್ಕೆ ತಕ್ಕಂತೆ ಬದುಕೂ ಕೂಡ ಬದಲಾಗಿದೆ. ಹಿಂದೆಲ್ಲಾ ಮನೆಯಲ್ಲಿ ಹೆಚ್ಚಿನ ಜನ ಇರುತ್ತಿದ್ದರು. ಎಲ್ಲವನ್ನೂ ಪ್ರಶ್ನಿಸಿ, ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದೆಂದು ಸಲಹೆ ನೀಡುತ್ತಿದ್ದರು. ಕಿರಿಯರು ಮಾಡುವ ಕೆಲಸದ ಮೇಲೆ ಹಿರಿಯರು ನಿಗಾ ವಹಿಸುತ್ತಿದ್ದರು.
ಈಗ ಕುಟುಂಬದಲ್ಲಿರೋದೇ ಕೆಲವೇ ಜನ. ಗಂಡ, ಹೆಂಡತಿ, ಒಬ್ಬರು ಇಲ್ಲವೇ ಇಬ್ಬರು ಮಕ್ಕಳು. ಮಕ್ಕಳು ಶಾಲೆಗೆ ಹೋದರೆ, ದಂಪತಿ ದುಡಿಯಲು ಹೋಗುತ್ತಾರೆ. ಗಂಡನೊಬ್ಬನ ದುಡಿಮೆಯಿಂದ ಸಂಸಾರ ಸಾಗಿಸುವುದು ಕಷ್ಟಸಾಧ್ಯ. ಹಾಗಾಗಿ ಹೆಣ್ಣುಮಕ್ಕಳೂ ಗಂಡನಿಗೆ ಸಾಥ್ ಕೊಡುತ್ತಾರೆ.
ಹೀಗೆ ದಿನವಿಡೀ ದುಡಿದು ಬಂದ ದಂಪತಿಗೆ ಮಕ್ಕಳ ಬಗ್ಗೆ ಕಾಳಜಿ ವಹಿಸುವುದು ಕಷ್ಟವಾಗುತ್ತದೆ. ಸಣ್ಣಗೆ ಜಗಳ ಆರಂಭವಾಗುತ್ತದೆ. ಮುಂದೆ ಅದೇ ದೊಡ್ಡದಾಗುತ್ತದೆ. ಮಕ್ಕಳು ಏನು ಮಾಡುತ್ತಿದ್ದಾರೆ ಎನ್ನುವುದನ್ನು ಗಮನಿಸಲು ಆಗಲ್ಲ. ಜೀವನ ಯಾಂತ್ರಿಕ ಎನಿಸುತ್ತದೆ.
ಮನೆ ಎಂದ ಮೇಲೆ ಜಗಳ ಇರಲೇಬೇಕು. ಆದರೆ, ಅದು ಜಾಸ್ತಿಯಾಗಬಾರದು. ಕುಟುಂಬದ ಸದಸ್ಯರಲ್ಲಿ ಪ್ರೀತಿ ವಿಶ್ವಾಸವಿರಬೇಕು. ಬಿಡುವಿಲ್ಲದಿದ್ದರೂ, ಸ್ವಲ್ಪ ಸಮಯವನ್ನು ಮಕ್ಕಳೊಂದಿಗೆ ಕಳೆಯಬೇಕು. ಪತ್ನಿಯ ಕೆಲಸಗಳಲ್ಲಿ ಸಹಾಯ ಮಾಡಬೇಕು.
ಕೆಲಸದ ಕಾರಣಕ್ಕಾಗಿ ಬೇರೆ ಊರಿನಲ್ಲಿ ನೆಲೆಸಿದ್ದರೆ, ಆಗಾಗ ಊರಿಗೆ ಹೋಗಿ ತಂದೆ, ತಾಯಿಯನ್ನು ಭೇಟಿ ಮಾಡಿ. ಸಹೋದರ, ಸಹೋದರಿಯರು, ಬಂಧುಗಳೊಂದಿಗೆ ಕೆಲ ಸಮಯ ಕಳೆಯಿರಿ. ಸ್ನೇಹಿತರನ್ನು ಭೇಟಿ ಮಾಡಿ. ಪ್ರವಾಸಿ ತಾಣಗಳಿಗೆ ಹೋಗಿಬನ್ನಿ.
ಇದೆಲ್ಲದಕ್ಕಿಂತ ಮುಖ್ಯವಾದುದು ಎಂದರೆ, ಕುಟುಂಬದಲ್ಲಿ ಭಾವನಾತ್ಮಕವಾದ ಸಂಬಂಧವಿರಬೇಕು. ಪರಸ್ಪರ ಪ್ರೀತಿ, ವಿಶ್ವಾಸವಿರಬೇಕು. ಜಗಳವಾಡಿದ ಮರುಗಳಿಗೆಯಲ್ಲೇ ಸಾರಿ ಕೇಳುವ ಗುಣವಿರಬೇಕು. ಇದೆಲ್ಲವೂ ಕುಟುಂಬದಲ್ಲಿ ಸೌಹಾರ್ದ ಸಂಬಂಧವನ್ನು ತರುತ್ತದೆ.