ಕೊರೋನಾ ಮಹಾಮಾರಿ ಈಗಾಗ್ಲೇ ಇಡೀ ಜಗತ್ತೇ ತಲ್ಲಣಿಸುವಂತೆ ಮಾಡಿದೆ. ಕೋವಿಡ್ ಸೋಂಕು ತಗ್ಗಿದ್ದರೂ ಭಯ ಮಾತ್ರ ಕಡಿಮೆಯಾಗಿಲ್ಲ. ನಾಲ್ಕನೇ ಅಲೆ ಅಪ್ಪಳಿಸಬಹುದು ಅನ್ನೋ ಭೀತಿ ಇದ್ದೇ ಇದೆ. ಬಹುತೇಕ ಎಲ್ಲರೂ ಲಸಿಕೆ ಪಡೆದಿರುವುದರಿಂದ ಕೊರೊನಾದ ಕೆಟ್ಟ ಪರಿಣಾಮ ಕೊಂಚ ತಗ್ಗಿದೆ.
ಕೋವಿಡ್ ನ ಭಯಾನಕತೆಯ ಬಗ್ಗೆ ಅರಿವಿಲ್ಲದೆ ಅನೇಕ ಜನರು ವೈರಸ್ ಅನ್ನು ನಿರ್ಲಕ್ಷಿಸುತ್ತಿದ್ದಾರೆ. ಕೋವಿಡ್ ಬಗ್ಗೆ ಇನ್ಮೇಲೆ ಅಷ್ಟೊಂದು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದುಕೊಂಡಿದ್ದಾರೆ. ಆದ್ರೆ ಡೆಲ್ಟಾಕ್ರಾನ್ ನಂತಹ ಹೊಸ ರೂಪಾಂತರಿಗಳು ಹರಡುತ್ತಿರುವಾಗ ಕೋವಿಡ್ ಬಗ್ಗೆ ಅಸಡ್ಡೆ ವಹಿಸೋದು ಸರಿಯಲ್ಲ. ಕೊರೊನಾ ಸೋಂಕು ತಗುಲಿದ್ರೆ ಏನು ಮಾಡಬೇಕು ಎಂಬ ಬಗ್ಗೆ ಕೆಲವೊಂದು ವಿಚಾರಗಳು ನಿಮ್ಮ ಗಮನದಲ್ಲಿರಬೇಕು.
ಶೀತ ಮತ್ತು ಉಸಿರಾಟದ ಕಾಯಿಲೆಗಳು ಸಾಮಾನ್ಯ. ಇದು ಅಷ್ಟೊಂದು ಅಪಾಯಕಾರಿಯಲ್ಲ ಅನ್ನೋದು ನಮ್ಮ ಭಾವನೆ. ಆದ್ರೆ ವೃದ್ಧರಿಗೆ ಈ ಶೀತ ಕೂಡ ತೊಂದರೆ ಮಾಡಬಹುದು. ಹಾಗಾಗಿ ಸೋಂಕು ತಗುಲಿರುವವರಿಂದ ಆದಷ್ಟು ದೂರವಿರಿ. ಸೋಂಕು ತಗುಲಿದೆ ಅಂದಾಕ್ಷಣ ನೀವು ಮಲಗಿಯೇ ಇರಬೇಕೆಂದೇನಿಲ್ಲ. ಚಟುವಟಿಕೆಯಿಂದಿರಬಹುದು.
ಆದ್ರೆ ಆಯಾಸ ಎನಿಸಿದರೆ ವಿಶ್ರಾಂತಿ ತೆಗೆದುಕೊಳ್ಳಿ. ವ್ಯಾಯಾಮ ಮಾಡುವುದು ಬೇಡ, ಸಂಪೂರ್ಣ ಚೇತರಿಸಿಕೊಂಡ ಬಳಿಕವಷ್ಟೇ ಎಕ್ಸರ್ಸೈಸ್ ಹಾಗೂ ರನ್ನಿಂಗ್ ಆರಂಭಿಸಿ. ಆಗಾಗ ಸೋಪ್ ಹಾಕಿ ಕೈ ತೊಳೆದುಕೊಳ್ಳುತ್ತಿರಿ. ಕೊರೊನಾ ಸೋಂಕು ತಗುಲಿದ್ರೆ ಮಾಸ್ಕ್ ಧರಿಸಿ. ಇತರರಿಗೆ ಸೋಂಕು ಹರಡದಂತೆ ಎಚ್ಚರ ವಹಿಸಿ.
ಮೊದಲೆಲ್ಲ ವರ್ಷಕ್ಕೊಮ್ಮೆ ಫ್ಲೂ ವ್ಯಾಕ್ಸಿನ್ ಕೊಡಲಾಗುತ್ತಿತ್ತು. ಇನ್ಮೇಲೆ ಅದೇ ರೀತಿ ವರ್ಷಕ್ಕೊಮ್ಮೆ ಕೋವಿಡ್ ವ್ಯಾಕ್ಸಿನ್ ಬಂದರೂ ಬರಬಹುದು. ನಿರ್ಲಕ್ಷ ಮಾಡದೇ ಅದನ್ನು ಪಡೆಯಿರಿ. ಯಾಕಂದ್ರೆ ಕೊರೊನಾ ರೂಪಾಂತರಿಯಲ್ಲಿ ಬದಲಾವಣೆಯಾದಂತೆ ನಿಮ್ಮ ಇಮ್ಯೂನಿಟಿ ಕೂಡ ಕಡಿಮೆಯಾಗುತ್ತದೆ. ಕೋವಿಡ್ ಬಂದರೆ ಕನಿಷ್ಟ 10 ದಿನಗಳ ಕಾಲ ಪ್ರತ್ಯೇಕವಾಗಿರಿ. ಮನೆಯವರಿಂದ ಆದಷ್ಟು ದೂರವಿರಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ಬೇರೆಯವರಿಗೆ ಸೋಂಕು ಹರಡದಂತೆ ನೋಡಿಕೊಳ್ಳಬಹುದು.