ನವದೆಹಲಿ: ಕೋವಿಡ್-19 ಲಸಿಕೆ ಕಡ್ಡಾಯವಾಗಿ ಪಡೆಯಬೇಕು ಎಂಬ ಆದೇಶದಿಂದಾಗಿ ದೇಶದಲ್ಲಿ ಜನರು ತಮ್ಮ ಉದ್ಯೋಗ ಮತ್ತು ಪಡಿತರವನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ವಾದವನ್ನು ಕೇಂದ್ರವು ಅಲ್ಲಗಳೆದಿದೆ. ಯಾರೂ ಕೂಡ ಏನನ್ನೂ ಕಳೆದುಕೊಂಡಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಕೋವಿಡ್-19 ಲಸಿಕೆಗಳ ಕ್ಲಿನಿಕಲ್ ಪ್ರಯೋಗಗಳ ಮಾಹಿತಿ ಮತ್ತು ಲಸಿಕೆ ಕಡ್ಡಾಯ ಆದೇಶ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಬಿ.ಆರ್. ಗವಾಯಿ ಅವರ ಪೀಠಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ವಿಷಯ ತಿಳಿಸಿದ್ದಾರೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ಕಡ್ಡಾಯ ಲಸಿಕೆ ಪಡೆದಿರಬೇಕು ಎಂಬ ಆದೇಶದಿಂದಾಗಿ ಹಲವಾರು ರಾಜ್ಯಗಳಲ್ಲಿ ಜನರು ತಮ್ಮ ಉದ್ಯೋಗವನ್ನು ಹಾಗೂ ತಮ್ಮ ಪಡಿತರವನ್ನು ಕಳೆದುಕೊಳ್ಳುತ್ತಿದ್ದಾರೆ. ಕಡ್ಡಾಯ ಲಸಿಕೆ ಆದೇಶದ ಪರಿಣಾಮವಾಗಿ ಜನರು ಮುಕ್ತವಾಗಿ ತಿರುಗಾಡಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದ್ದಾರೆ.
ಇನ್ನು ಈ ಹೇಳಿಕೆಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರದ ಪರ ವಕೀಲರು, ಯಾರೂ ಕೂಡ ಏನನ್ನೂ ಕಳೆದುಕೊಂಡಿಲ್ಲ. ಕಡ್ಡಾಯ ಲಸಿಕೆ ಕಾರಣದಿಂದ, ಇದುವರೆಗೂ ಲಸಿಕೆ ಪಡೆಯದ ಯಾರೂ ಕೂಡ ಉದ್ಯೋಗ ಕಳೆದುಕೊಂಡಿಲ್ಲ ಎಂಬುದಾಗಿ ಪೀಠಕ್ಕೆ ಮೆಹ್ತಾ ಮಾಹಿತಿ ನೀಡಿದ್ದಾರೆ.