ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಮತ್ತೊಂದು ಅಲೆ ಎದುರಾಗುವ ಭೀತಿ ವ್ಯಕ್ತವಾಗಿದೆ. ಕಳೆದ 24 ಗಂಟೆಯಲ್ಲಿ 5,000 ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.
ಹೀಗಾಗಿ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸಂದೇಶ ರವಾನಿಸಿದ್ದು, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ತಪಾಸಣೆ ಹೆಚ್ಚಿಸುವಂತೆ ತಿಳಿಸಲಾಗಿದ್ದು, ಕೋವಿಡ್ ಹೆಚ್ಚಳವಾಗದಂತೆ ನಿಯಂತ್ರಿಸಿ ಎಂದು ತಿಳಿಸಿದ್ದು, ಇದರ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಮಹತ್ವದ ತೀರ್ಮಾನ ಒಂದನ್ನು ಕೈಗೊಂಡಿದೆ.
ಉತ್ತರ ಪ್ರದೇಶದಲ್ಲಿ ಅಂತರರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಕೋವಿಡ್ 19 ಪರೀಕ್ಷೆ ಕಡ್ಡಾಯಗೊಳಿಸಲಾಗಿದ್ದು, ಈ ಕುರಿತಂತೆ ಶನಿವಾರ ಆದೇಶ ಹೊರ ಬಿದ್ದಿದೆ. ಒಂದು ವೇಳೆ ಪ್ರಯಾಣಿಕರಲ್ಲಿ ಸೋಂಕು ಖಾತ್ರಿಯಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮಾರ್ಗಸೂಚಿಯನ್ನೂ ಸಹ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.