ಟೋಕಿಯೋ: ಏಕಾಂಗಿಯಾಗಿ ವಾಸಿಸುವವರಿಗೆ ಕೋವಿಡ್ ಕ್ವಾರಂಟೈನ್ ನಲ್ಲಿರುವುದು ಸವಾಲಾಗಿ ಪರಿಣಮಿಸಬಹುದು. ಆದರೂ ಇದನ್ನು ಎಲ್ಲರೂ ಕಟ್ಟುನಿಟ್ಟಾಗಿ ಅನುಸರಿಸಬೇಕಾಗಿದೆ. ಇದರಿಂದ ವೈರಸ್ ಹರಡುವುದನ್ನು ತಡೆಯಬಹುದು. ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲು ಅಪ್ಲಿಕೇಶನ್‌ಗಳು ಮತ್ತು ಇತರ ಸೇವೆಗಳ ಬಳಕೆಯು ಇದೀಗ ಸಾಮಾನ್ಯವಾಗಿದೆ.
ಅದರಲ್ಲೂ ಜಪಾನ್‌ನಲ್ಲಿ ಜನರು ಈ ಸವಲತ್ತನ್ನು ಬಹಳ ದೊಡ್ಡ ರೀತಿಯಲ್ಲಿ ಪಡೆಯುತ್ತಿದ್ದಾರೆ ಎಂದು ತೋರುತ್ತಿದೆ. ಕೋವಿಡ್ ಕ್ವಾರಂಟೈನ್ ನಲ್ಲಿರುವವರಿಗೆ ಜಪಾನ್ ಸರ್ಕಾರ ಹೋಮ್ ಕೇರ್ ಪ್ಯಾಕೇಜ್ ನೀಡುತ್ತಿದೆ. ಇದರ ಫೋಟೋವನ್ನು ರೆಡ್ಡಿಟ್ ಬಳಕೆದಾರ ಹಂಚಿಕೊಂಡಿದ್ದು, ನೆಟ್ಟಿಗರಿಗೆ ಅಚ್ಚರಿಯನ್ನುಂಟು ಮಾಡಿದೆ. ಯಾಕೆಂದ್ರೆ ಭಾರಿ ಪ್ರಮಾಣದಲ್ಲಿ ದಿನಬಳಕೆ ವಸ್ತುಗಳನ್ನು ಕಳುಹಿಸುವುದಲ್ಲದೆ, ಉಚಿತವಾಗಿ ಕೊಡುತ್ತಿದೆ
ಹೌದು, ದಿನಬಳಕೆ ವಸ್ತುಗಳನ್ನು ವಿತರಿಸಲಾಗಿರುವ ಚಿತ್ರವನ್ನು ಪೋಸ್ಟ್ ಮಾಡುತ್ತಾ, ಬಳಕೆದಾರರು ಮಾಹಿತಿ ಹಂಚಿಕೊಂಡಿದ್ದಾರೆ. ಕೋವಿಡ್ ಸೋಂಕಿತರಿಗೆ ಜಪಾನ್ ಸರ್ಕಾರ ಉಚಿತವಾಗಿಯೇ ಇಷ್ಟೊಂದು ಪ್ರಮಾಣದಲ್ಲಿ ಅಗತ್ಯ ವಸ್ತುಗಳನ್ನು ಕಳುಹಿಸುತ್ತಿದೆ. ಕೋವಿಡ್ ಪಾಸಿಟಿವ್ ಬಂದ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಪ್ರತಿದಿನ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಾರೆ. ಹೋಟೆಲ್ ನಲ್ಲಿ ಕ್ವಾರಂಟೈನ್ ಆಗುತ್ತೀರಾ ಎಂದು ಕೇಳಿದ್ದಕ್ಕೆ ವ್ಯಕ್ತಿ ತಾನು ಮನೆಯಲ್ಲೇ ಇರುವುದಾಗಿ ಹೇಳಿದ್ದಾನೆ. ಹೀಗಾಗಿ ಇಷ್ಟೊಂದು ಪ್ರಮಾಣದಲ್ಲಿ ಅಗತ್ಯ ಸಾಮಗ್ರಿಗಳನ್ನು ಆತನ ಮನೆಗೆ ಉಚಿತವಾಗಿ ಕಳುಹಿಸಿದೆ.
ಅಗತ್ಯ ಸಾಮಾಗ್ರಿಗಳಲ್ಲಿ ಹೆಚ್ಚಾಗಿ ನೂಡಲ್ಸ್, ಕಾಫಿ, ನೀರು, ಪ್ಯಾಕೇಜ್ ಮಾಡಿದ ಹಣ್ಣುಗಳು, ತ್ವರಿತ ಅಕ್ಕಿ ಮತ್ತು ಚಿಪ್ಸ್ ಸೇರಿದಂತೆ ಹಲವಾರು ಬಗೆಯ ಆಹಾರವನ್ನು ಒಳಗೊಂಡಿದೆ ಎಂದು ಬಳಕೆದಾರರು ತಿಳಿಸಿದ್ದಾರೆ.