ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಸರ್ಕಾರಿ ಕಚೇರಿಗಳಲ್ಲಿ 50 ಪ್ರತಿಶತ ಸಿಬ್ಬಂದಿ ಹಾಜರಾತಿಯೊಂದಿಗೆ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದೆ.
ಅಲ್ಲದೇ ಖಾಸಗಿ ಕಚೇರಿಗಳಲ್ಲಿ ಯಾರಾದರೂ ಕೊರೊನಾ ಸೋಂಕಿಗೆ ಒಳಗಾದಲ್ಲಿ ವೇತನವನ್ನು ನೀಡಿ ಅವರಿಗೆ 7 ದಿನಗಳ ರಜೆಯನ್ನು ನೀಡಬೇಕು ಎಂದು ಯೋಗಿ ಆದಿತ್ಯನಾಥ್ ಸರ್ಕಾರ ಸೂಚನೆ ಹೊರಡಿಸಿದೆ.
ಕಚೇರಿಗಳಲ್ಲಿ ಕೋವಿಡ್ 19 ಹೆಲ್ಪ್ ಡೆಸ್ಕ್ ಸ್ಥಾಪನೆ ಮಾಡಬೇಕು ಹಾಗೂ ಸ್ಕ್ರೀನಿಂಗ್ ನಡೆಸದೇ ಕಚೇರಿಯ ಒಳಕ್ಕೆ ಯಾರಿಗೂ ಪ್ರವೇಶ ನೀಡುವಂತಿಲ್ಲ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಕಚೇರಿಗಳಲ್ಲಿ 50 ಪ್ರತಿಶತ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ. ತುರ್ತು ಸೇವಾ ಕಚೇರಿಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಖಾಸಗಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ವರ್ಕ್ ಫ್ರಾಮ್ ಹೋಮ್ ಪದ್ಧತಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ ಎಂದು ಸಿಎಂ ಕಚೇರಿಯಿಂದ ಮಾಹಿತಿ ನೀಡಲಾಗಿದೆ.
ಒಪಿಡಿಗಳಿಗೆ ಭೇಟಿ ನೀಡುವವರು ಆನ್ಲೈನ್ನಲ್ಲಿ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕು ಹಾಗೂ ವಿಶೇಷ ಪ್ರಕರಣಗಳಿದ್ದರೆ ಮಾತ್ರ ರೋಗಿಯನ್ನು ಆಸ್ಪತ್ರೆಗೆ ಕರೆಸಬೇಕು ಎಂದು . ಆದಷ್ಟು ಟೆಲಿ ಸಂದರ್ಶನಕ್ಕೆ ಹೆಚ್ಚಿನ ಮಹತ್ವ ನೀಡುವಂತೆ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.