ಮೂರು ವರ್ಷಗಳ ಹಿಂದೆ ದೇಶದಲ್ಲಿ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಸಾರ್ವಜನಿಕರನ್ನು ಹಿಂಡಿ ಹಿಪ್ಪೆ ಮಾಡಿತ್ತು. ಇದರ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಿದ್ದ ಪರಿಣಾಮ ಆರ್ಥಿಕವಾಗಿಯೂ ಜನ ಕಂಗೆಟ್ಟಿದ್ದರು.
ಮಹಾಮಾರಿ ಕೊರೊನಾಗೆ ಭಾರತದಲ್ಲಿ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದು, ಅಷ್ಟೇ ಸಂಖ್ಯೆಯಲ್ಲಿ ಮಕ್ಕಳು, ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದರು. ಹಾಗೆಯೇ ಬೆಳೆದು ನಿಂತ ಮಕ್ಕಳು ಕಣ್ಣೆದುರೆ ಕೊರೊನಾಗೆ ಬಲಿಯಾದ ಕಾರಣ ಹೆತ್ತವರು ತಮ್ಮ ಜೀವನಪೂರ್ತಿ ಕಣ್ಣೀರಿನಲ್ಲಿ ಕಳೆಯುವಂತಾಯಿತು.
ಆದರೆ ಇದರ ಮಧ್ಯೆ ಕೊರೊನಾಗೆ ಲಸಿಕೆ ಕಂಡುಹಿಡಿದ ಕಾರಣ ಸಾವು ನೋವು ಸಾಕಷ್ಟು ಸಂಖ್ಯೆಯಲ್ಲಿ ತಪ್ಪಿದೆ. ಇದೀಗ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ ಪ್ರಕಟಿಸಿರುವ ವರದಿ ಒಂದರಲ್ಲಿ ಮಹತ್ವದ ಮಾಹಿತಿ ಬಹಿರಂಗವಾಗಿದೆ.
ಭಾರತದಲ್ಲಿ ವ್ಯಾಪಕವಾಗಿ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಆಯೋಜಿಸಿದ್ದ ಕಾರಣ 34 ಲಕ್ಷಕ್ಕೂ ಅಧಿಕ ಮಂದಿಯ ಪ್ರಾಣ ಉಳಿಯಲು ಕಾರಣವಾಗಿದೆ ಎಂದು ಈ ವರದಿಯಲ್ಲಿ ತಿಳಿಸಲಾಗಿದ್ದು, ಇದನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಶುಕ್ರವಾರದಂದು ಬಿಡುಗಡೆ ಮಾಡಿದ್ದಾರೆ.