ಕೊರೊನಾ ಪೆಂಡಮಿಕ್ ಆರಂಭವಾದಾಗಿನಿಂದ್ಲೂ ವೈದ್ಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರೋಗಿಗಳ ಆರೈಕೆ ಮಾಡ್ತಿದ್ದಾರೆ. ಕೊರೊನಾ ರೋಗಿಗಳಿಗೆ ಚಿಕಿತ್ಸೆ ಕೊಟ್ಟಿದ್ದ ಎಷ್ಟೋ ವೈದ್ಯರು ಅದೇ ಮಹಾಮಾರಿಯ ಸೋಂಕಿಗೆ ತುತ್ತಾಗಿ ಜೀವವನ್ನೇ ಕಳೆದುಕೊಂಡಿದ್ದಾರೆ. ಆದ್ರೆ 2020ರ ಮಾರ್ಚ್ ಬಳಿಕ ಕೊರೊನಾ ವೈರಸ್‌ನಿಂದಾಗಿ ಎಷ್ಟು ವೈದ್ಯರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿಯೇ ಇಲ್ಲ. ಹೀಗಂತ ಖುದ್ದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಹೇಳಿದೆ.
2022ರ ಜುಲೈ 23ರ ವೇಳೆಗೆ ಭಾರತದಲ್ಲಿ ಕೋವಿಡ್‌ನಿಂದಾಗಿ ಒಟ್ಟಾರೆ 5,25,997 ಮಂದಿ ಮೃತಪಟ್ಟಿದ್ದಾರೆ. ಆದ್ರೆ ಇವರ ಪೈಕಿ ಎಷ್ಟು ವೈದ್ಯರು ಮೃತಪಟ್ಟಿದ್ದಾರೆಂಬ ಬಗ್ಗೆ ಖಚಿತ ಅಂಕಿ ಅಂಶಗಳಿಲ್ಲವೆಂದು ಸರ್ಕಾರ ತನ್ನ ಲಿಖಿತ ಹೇಳಿಕೆಯಲ್ಲಿ ತಿಳಿಸಿದೆ.
ಆರೋಗ್ಯ ಇಲಾಖೆಯ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಮಾತನಾಡಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಕೋವಿಡ್ -19 ವಿರುದ್ಧ ಹೋರಾಡುವ ಆರೋಗ್ಯ ಕಾರ್ಯಕರ್ತರಿಗೆ ವಿಮಾ ಯೋಜನೆಯನ್ನು ಸರ್ಕಾರ ಒದಗಿಸಿದೆ ಎಂದ್ರು.
ಕೋವಿಡ್-19 ರೋಗಿಗಳ ನೇರ ಸಂಪರ್ಕ ಮತ್ತು ಆರೈಕೆಯಲ್ಲಿದ್ದ, ಇದರಿಂದ ಪ್ರಭಾವಿತರಾಗುವ, ಕೋವಿಡ್-19 ಸಂಬಂಧಿತ ಆಕಸ್ಮಿಕ ಸಾವಿನಿಂದಾಗುವ ಅಪಾಯವಿರುವ ಸಮುದಾಯ ಆರೋಗ್ಯ ಕಾರ್ಯಕರ್ತರು ಮತ್ತು ಖಾಸಗಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಆರೋಗ್ಯ ಸೇವೆ ಒದಗಿಸುವವರಿಗೆ 50 ಲಕ್ಷ ರೂ. ವಿಮೆ ನೀಡುತ್ತಿರುವುದಾಗಿ ತಿಳಿಸಿದ್ರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಸೋಂಕಿನಿಂದ ಸಾವನ್ನಪ್ಪಿದವರಿಗೆ 50,000 ರೂಪಾಯಿಗಳನ್ನು ಪರಿಹಾರವಾಗಿ ನೀಡಲು ಶಿಫಾರಸು ಮಾಡಿದೆ ಎಂದು ಅವರು ಹೇಳಿದ್ದಾರೆ.