ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಬಾಲಕರಿಗಿಂತ ಹೆಚ್ಚಾಗಿ ಬಾಲಕಿಯರೇ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಸೇವ್ ದಿ ಚಿಲ್ಡ್ರನ್ ಸಂಸ್ಥೆ ಅಧ್ಯಯನವೊಂದನ್ನು ನಡೆಸುವ ಮೂಲಕ ಮಾಹಿತಿ ಬಿಡುಗಡೆ ಮಾಡಿದೆ. ಇಂದು ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ದಿ ವರ್ಲ್ಡ್ ಆಫ್ ಇಂಡಿಯನ್ ಗರ್ಲ್ಸ್-ವಿಂಗ್ಸ್ 2022 ಎಂಬ ಶೀರ್ಷಿಕೆಯಲ್ಲಿ ಈ ವರದಿಯನ್ನು ಬಿಡುಗಡೆ ಮಾಡಿದೆ.
ಕೊಳಗೇರಿ ಹಾಗೂ ಗ್ರಾಮೀಣ ಭಾಗಗಳ ಸುಮಾರು 67 ಪ್ರತಿಶತದಷ್ಟು ಬಾಲಕಿಯರು ಆನ್ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದೇ ಶಾಲೆಗಳನ್ನು ತೊರೆದಿದ್ದಾರೆ. ಕೋವಿಡ್ ಮೊದಲ ಹಾಗೂ ಎರಡನೇ ಅಲೆಯ ಸಂದರ್ಭಗಳಲ್ಲಿ ಈ ರೀತಿ ಸಮಸ್ಯೆ ಉಂಟಾಗಿದೆ ಎಂದು ಈ ವರದಿಯು ತಿಳಿಸಿದೆ.
ಇನ್ನು ಬಾಲಕಿಯರು ಶಿಕ್ಷಣದಿಂದ ವಂಚಿತರಾಗಿದ್ದು ಒಂದೆಡೆಯಾದರೆ ಶಾಲೆ ಬಿಟ್ಟ ಹೆಣ್ಣು ಮಕ್ಕಳನ್ನು ಅನೇಕರು ಬಾಲ್ಯ ವಿವಾಹ ಮಾಡಿದ್ದಾರೆ. ಕರ್ನಾಟಕ, ಬಿಹಾರ, ಮಹಾರಾಷ್ಟ್ರ, ತೆಲಂಗಾಣ, ದೆಹಲಿಯಲ್ಲಿ ಈ ವಿಚಾರವಾಗಿ ಸಮೀಕ್ಷೆಯನ್ನು ನಡೆಸಲಾಗಿತ್ತು. ಇದರ ಜೊತೆಯಲ್ಲಿ ಶೇಕಡಾ 68ರಷ್ಟು ಬಾಲಕಿಯರು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ ಎಂದೂ ತಿಳಿದುಬಂದಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಸೇವ್ ದಿ ಚಿಲ್ಟ್ರನ್ ಸಿಇಓ ಸುದರ್ಶನ್ ಸುಚಿ, ಆನ್ಲೈನ್ ಶಿಕ್ಷಣದಿಂದಾಗಿ ಕೊಳಗೇರಿ ಹಾಗೂ ಗ್ರಾಮೀಣ ಭಾಗದ ಬಾಲಕಿಯರ ಶಿಕ್ಷಣದ ಕನಸು ಕಮರಿ ಹೋಗಿದೆ. ನಮ್ಮ ಸಂಸ್ಥೆಯ ಅಧ್ಯಯನವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಗಂಭೀರವಾಗಿ ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.