ಕೊರೋನಾ ನಿಯಂತ್ರಣಕ್ಕೆ ಬಿಬಿಎಂಪಿ ಪಣ ತೊಟ್ಟು ನಿಂತಿದೆ. ನಿಯಮಗಳ ಪಾಲನೆಯಾಗಲು ನಗರದ ಪ್ರತಿ ವಾರ್ಡ್ ನಲ್ಲಿ ಮಾರ್ಷಲ್ ಗಳನ್ನು ನೇಮಿಸಿದೆ. ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡದ ಬಿಸಿ ಮುಟ್ಟಿಸಿದೆ. ಹೀಗೆ ಕೋವಿಡ್ ನಿಯಮ ಉಲ್ಲಂಘಿಸಿದವರಿಂದ ಬಿಬಿಎಂಪಿ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿದೆ.
ಹೌದು, ಕೊರೋನಾ ನಿಯಂತ್ರಣಕ್ಕೆ ಕಾರಣರಾಗಿರುವ ಮಾರ್ಷಲ್ ಗಳು ಕಳೆದ 21 ತಿಂಗಳಿಂದ ಕೋವಿಡ್ ನಿಯಮ ಉಲ್ಲಂಘಿಸಿದವರಿಂದ ಸಂಗ್ರಹಿಸಿರುವ ದಂಡದ ಮೊತ್ತ ಹದಿನಾಲ್ಕು ಕೋಟಿಗಿಂತ ಹೆಚ್ಚು. ನಿಖರವಾಗಿ ಹೇಳುವುದಾದರೆ 14,66,55,441 ರೂಪಾಯಿ.
ಬೆಂಗಳೂರಿನಂತಹ ಬೃಹತ್ ಸಿಟಿಯಲ್ಲಿ ಬೆರಳೆಣಿಕೆ ಮಾರ್ಷಲ್ ಗಳು ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದಾರೆ. ನಗರದ 198 ವಾರ್ಡ್ ಗಳಲ್ಲಿ 260 ಮಾರ್ಷಲ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ 21 ತಿಂಗಳಿಂದ ಕೊರೋನಾ ನಿಯಮ ಪಾಲಿಸದವರಿಂದ ದಂಡ ವಸೂಲು ಮಾಡಲಾಗ್ತಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದವರ ವಿರುದ್ಧ 6,06,579 ಪ್ರಕರಣಗಳು ದಾಖಲಾಗಿವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದ 33,880 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನು ಸಾಮಾಜಿಕ ಅಂತರ ಮರೆತವರಿಂದ 77,67,160 ರೂ. ವಸೂಲಾಗಿದೆ. ಒಟ್ನಲ್ಲಿ ಕೊರೋನಾ ರೂಲ್ಸ್ ಮರೆತವರು ಬಿಬಿಎಂಪಿ ಖಜಾನೆಗೆ ಉತ್ತಮ ಮೊತ್ತದ ಕೊಡುಗೆ ನೀಡಿದ್ದಾರೆ.