2022ರಲ್ಲೂ ಕೊರೊನಾ ಆರ್ಭಟ ಜೋರಾಗಿಯೇ ಇದೆ. ಆದ್ರೆ ಕೋವಿಡ್ ನಿಂದ ಮೃತಪಟ್ಟವರಲ್ಲಿ ವ್ಯಾಕ್ಸಿನ್ ಪಡೆಯದೇ ಇರುವವರ ಸಂಖ್ಯೆಯೇ ಹೆಚ್ಚು. ಕಳೆದ 2 ತಿಂಗಳುಗಳಲ್ಲಿ 32,549 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಪೈಕಿ 30 ಸಾವಿರ ಜನರು ವ್ಯಾಕ್ಸಿನ್ ಪಡೆದಿರಲಿಲ್ಲ.
ಭಾರತದಲ್ಲಿ ಕೋವಿಡ್ ಗೆ ಪ್ರಾಣ ಕಳೆದುಕೊಂಡವರ ಪೈಕಿ ಶೇ.92 ರಷ್ಟು ಮಂದಿ ವ್ಯಾಕ್ಸಿನ್ ಪಡೆದಿರಲಿಲ್ಲ ಅನ್ನೋದು ಅಂಕಿ ಅಂಶಗಳಲ್ಲಿ ದೃಢಪಟ್ಟಿದೆ. ಹಾಗಾಗಿ ಕೋವಿಡ್ ಲಸಿಕೆ ಪಡೆಯುವುದರಿಂದ ಸಾವಿನ ಅಪಾಯ ಗಣನೀಯವಾಗಿ ಕಡಿಮೆಯಾಗಲಿದೆ ಅನ್ನೋದು ಸಾಬೀತಾದಂತಾಗಿದೆ.
ಕೊರೊನಾ ವ್ಯಾಕ್ಸಿನ್ ಎಷ್ಟು ಪರಿಣಾಮಕಾರಿ ಅನ್ನೋದು ಕೋವಿಡ್ 3ನೇ ಅಲೆಯ ಸಂದರ್ಭದಲ್ಲಿ ಸಹ ಸಾಬೀತಾಗಿದೆ. ಸಾವು ತಡೆಗಟ್ಟುವಿಕೆಯಲ್ಲಿ ಮೊದಲ ಡೋಸ್ ಶೇ.98.9 ರಷ್ಟು ಪರಿಣಾಮಕಾರಿಯಾಗಿದ್ದರೆ, ಎರಡೂ ಡೋಸ್ ಪಡೆದಿದ್ದಲ್ಲಿ ಶೇ.99.3ರಷ್ಟು ಅದು ಪರಿಣಾಮಕಾರಿಯಾಗಲಿದೆ ಅಂತಾ ಭಾರತದ ಸಂಶೋಧಕರೇ ಸ್ಪಷ್ಟಪಡಿಸಿದ್ದಾರೆ.
ಕೋವಿನ್ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಸುಮಾರು 94 ಕೋಟಿ ಜನರು ಕೊರೊನಾ ವ್ಯಾಕ್ಸಿನ್ ಪಡೆದಿದ್ದಾರೆ. ಇವರಲ್ಲಿ 15 ಕೋಟಿ ಜನರು ಒಂದು ಡೋಸ್ ಪಡೆದಿದ್ದರೆ, ಉಳಿದವರಿಗೆ ಡಬಲ್ ವ್ಯಾಕ್ಸಿನ್ ಆಗಿದೆ. ಸುಮಾರು 51 ಕೋಟಿ ಜನರಿಗೆ ವ್ಯಾಕ್ಸಿನ್ ಆಗಿಲ್ಲ.