ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸಂಭಾವ್ಯ ಕೊರೊನಾ ಮೂರನೇ ಅಲೆಯ ಬಗ್ಗೆ ಆತಂಕ ಹೆಚ್ಚಾಗಿರುವುದರ ನಡುವೆಯೇ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಯಾವುದೇ ಪರಿಸ್ಥಿತಿಗೂ ನಾವು ಸಿದ್ಧರಾಗಿ ಇರಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಬ್ರಿಟನ್ನಲ್ಲಿ ಉಂಟಾಗಿರುವ ಪರಿಸ್ಥಿತಿಯು ನಮ್ಮಲ್ಲಿಯೂ ಉಂಟಾಗದಂತೆ ನಾವು ಎಚ್ಚರ ವಹಿಸಬೇಕು ಹಾಗೂ ಎಲ್ಲಾ ರೀತಿಯ ಪರಿಸ್ಥಿತಿಗೂ ನಾವು ಸಿದ್ಧರಿರಬೇಕು. ಪ್ರಪಂಚದ ಇತರೆ ದೇಶಗಳಲ್ಲಿ ಪರಿಸ್ಥಿತಿ ಬಿಗಡಾಯಿಸುವ ವೇಳೆಯಲ್ಲಿ ನಾವು ಅದನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕು. ನಾವು ಯಾವುದೇ ಪರಿಸ್ಥಿತಿಗೆ ಸಿದ್ಧರಿರಬೇಕು ಎಂದು ಗುಲೇರಿಯಾ ಹೇಳಿದ್ದಾರೆ ಎನ್ನಲಾಗಿದೆ.
ಬ್ರಿಟನ್ನಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸ 12,133 ಪ್ರಕರಣಗಳು ವರದಿಯಾಗಿವೆ.ಇದು ಈವರೆಗೆ ದಾಖಲಾದ ಅತೀ ಹೆಚ್ಚು ಒಮಿಕ್ರಾನ್ ಪ್ರಕರಣವಾಗಿದೆ. ಈ ಮೂಲಕ ಓಮಿಕ್ರಾನ್ ರೂಪಾಂತರಿಯ ಸಂಖ್ಯೆ 37,101ಕ್ಕೆ ತಲುಪಿದೆ ಎಂದು ಬ್ರಿಟನ್ ಆರೋಗ್ಯ ಭದ್ರತಾ ಏಜೆನ್ಸಿ ಮಾಹಿತಿ ನೀಡಿದೆ.
ಇತ್ತ ಭಾರತದಲ್ಲಿ ಈವರೆಗೆ ಒಟ್ಟು 153 ಓಮಿಕ್ರಾನ್ ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ನಿನ್ನೆ ಆರು ಹಾಗೂ ಗುಜರಾತ್ನಲ್ಲಿ ನಾಲ್ಕು ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.