ದೇಶಾದ್ಯಂತ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಮಹಾರಾಷ್ಟ್ರ ಪುಣೆ ಜಿಲ್ಲೆಯಲ್ಲಿ ಕೋವಿಡ್ 19 ಹಾಗೂ ಓಮಿಕ್ರಾನ್ ರೂಪಾಂತರಿಯನ್ನು ತಡೆಗಟ್ಟುವ ಸಲುವಾಗಿ ಕೋವಿಡ್ ಮುಕ್ತ ಗ್ರಾಮ ನಿರ್ಮಾಣಕ್ಕೆಂದು ಸ್ಪರ್ಧೆಯೊಂದನ್ನು ಆರಂಭಿಸಿದೆ. ಜನವರಿ 10ರಿಂದ ಈ ಸ್ಪರ್ಧೆಯು ಆರಂಭಗೊಂಡಿದೆ.
ಈ ಸ್ಪರ್ಧೆಯು ಮಾರ್ಚ್ 15ರವರೆಗೆ ಇರಲಿದೆ. ಪುಣೆ ವಿಭಾಗದ ಮೂರು ಉತ್ತಮ ಕಾರ್ಯನಿರ್ವಹಣೆಯ ಗ್ರಾಮಗಳಿಗೆ ನಗದು ಬಹುಮಾನವನ್ನು ನೀಡಲಾಗುತ್ತದೆ.
ಸ್ಪರ್ಧೆಯನ್ನು ವಿವರಿಸಲು ಜಿಲ್ಲಾಡಳಿತ ವಿವರವಾದ ಮಾರ್ಗಸೂಚಿಗಳನ್ನು ನೀಡಿದೆ. ಮಾರ್ಗಸೂಚಿಗಳ ಪ್ರಕಾರ ಸ್ಪರ್ಧೆಯ ಕೊನೆಯಲ್ಲಿ ಮೂರು ಅತ್ಯುತ್ತಮ ಕಾರ್ಯ ನಿರ್ವಹಣೆಯ ಗ್ರಾಮಗಳನ್ನು ಆಯ್ಕೆ ಮಾಡಲಾಗುತ್ತದೆ. ಮೊದಲ ಸ್ಥಾನ ಪಡೆದ ಗ್ರಾಮಕ್ಕೆ 50 ಲಕ್ಷ ರೂಪಾಯಿ, 2ನೇ ಸ್ಥಾನ ಪಡೆದ ಗ್ರಾಮಕ್ಕೆ 25 ಲಕ್ಷ ರೂಪಾಯಿ ಹಾಗೂ ಮೂರನೇ ಸ್ಥಾನ ಪಡೆದ ಗ್ರಾಮಕ್ಕೆ 15 ಲಕ್ಷ ರೂಪಾಯಿ ಸಿಗಲಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಪುಣೆ ಜಿಲ್ಲಾ ಪರಿಷತ್ನ ಚೀಫ್ ಎಕ್ಸಿಕ್ಯೂಟಿವ್ ಆಯುಷ್ ಪ್ರಸಾದ್, ಪುಣೆಯ ಗ್ರಾಮಗಳನ್ನು ಕೋವಿಡ್ ಮುಕ್ತ ಮಾಡುವ ಸಲುವಾಗಿ ನಾವು ಕೋವಿಡ್ ಮುಕ್ತ ಗ್ರಾಮ ಎಂಬ ಅಭಿಯಾನವನ್ನು ಆರಂಭಿಸಿದ್ದೇವೆ. ಕೋವಿಡ್ನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಗ್ರಾಮಗಳಿಗೆ ಪ್ರಶಸ್ತಿ ಸಿಗಲಿದೆ ಎಂದು ಹೇಳಿದ್ದಾರೆ.