ದೇಶದಲ್ಲಿ ಕೋವಿಡ್ 19 ಪ್ರಕರಣಗಳು ದಿಢೀರ್ ಏರಿಕೆ ಕಾಣುತ್ತಿರೋದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ದೆಹಲಿ, ಕರ್ನಾಟಕ, ತಮಿಳುನಾಡು, ಹರಿಯಾಣ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್ ಹಾಗೂ ಜಾರ್ಖಂಡ್ ರಾಜ್ಯಗಳಿಗೆ ಪತ್ರ ಬರೆದಿದ್ದು, ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸುವಂತೆ ಹಾಗೂ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಕರ್ಯಗಳನ್ನು ಇನ್ನಷ್ಟು ಬಲಪಡಿಸುವಂತೆ ಸಲಹೆ ನೀಡಿದ್ದಾರೆ.
14 ನಗರಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಹಠಾತ್ ಏರಿಕೆಯನ್ನು ಗುರುತಿಸಿರುವ ಕೇಂದ್ರ ಸರ್ಕಾರವು ತಕ್ಷಣವೇ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ರಾಜ್ಯಗಳನ್ನು ಒತ್ತಾಯಿಸಿದೆ. ದೆಹಲಿ ಹಾಗೂ ಮಹಾರಾಷ್ಟ್ರವು ಓಮಿಕ್ರಾನ್ ಪ್ರಕರಣಗಳನ್ನು ಹೆಚ್ಚಾಗಿ ವರದಿ ಮಾಡುತ್ತಿರುವ ರಾಜ್ಯಗಳಾಗಿವೆ.
ಇಲ್ಲಿ ಓಮಿಕ್ರಾನ್ ರೂಪಾಂತರಿಯು ಹೆಚ್ಚಾಗಿ ಕಾಣಿಸಿಕೊಂಡಿದೆ. ಇನ್ನು ನಗರಗಳ ಪೈಕಿ ಬೆಂಗಳೂರು ಹಾಗೂ ಅಹಮದಾಬಾದ್ನಲ್ಲಿ ಓಮಿಕ್ರಾನ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿದೆ ಎಂದು ಕೇಂದ್ರ ಹೇಳಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 115 ಕೋವಿಡ್ ಪ್ರಕರಣಗಳ ಪೈಕಿ 46 ಪ್ರತಿಶತ ಪ್ರಕರಣಗಳು ಓಮಿಕ್ರಾನ್ ರೂಪಾಂತರಿಯನ್ನು ಹೊಂದಿದೆ. ವೇಗವಾಗಿ ಹರಡಬಲ್ಲ ಓಮಿಕ್ರಾನ್ ರೂಪಾಂತರಿಯು ಕಮ್ಯೂನಿಟಿ ಸ್ಪ್ರೆಡ್ ಆಗುತ್ತಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಆತಂಕ ವ್ಯಕ್ತಪಡಿಸಿದ್ದಾರೆ.