ಕೋವಿಡ್ 19 ಸಂತ್ರಸ್ತರ ಕುಟುಂಬಗಳಿಗೆ ಸರಿಯಾದ ಸಮಯಕ್ಕೆ ಪರಿಹಾರಗಳನ್ನು ವಿತರಿಸುವಲ್ಲಿ ವಿಫಲವಾದ ರಾಜ್ಯ ಸರ್ಕಾರಗಳನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಕೋವಿಡ್ ಪರಿಹಾರವು ಸಂಬಂಧಪಟ್ಟ ಕುಟುಂಬಗಳಿಗೆ ತಲುಪುವಲ್ಲಿ ನಿಮ್ಮ ಪ್ರಯತ್ನಗಳನ್ನು ಇನ್ನಷ್ಟು ತೀವ್ರಗೊಳಿಸಿ ಎಂದು ರಾಜ್ಯಗಳಿಗೆ ಸರ್ವೋಚ್ಛ ನ್ಯಾಯಾಲಯ ಖಡಕ್ ಸೂಚನೆ ನೀಡಿದೆ.
ಕೋವಿಡ್ 19ನಿಂದ ಮೃತಪಟ್ಟ ಕುಟುಂಬ ಸದಸ್ಯರಿಗೆ ಪರಿಹಾರವನ್ನು ನೀಡುವಂತೆ ಕೋರಿ ವಕೀಲ್ ಗೌರವ್ ಕುಮಾರ್ ಬನ್ಸಾಲ್ ಹಾಗೂ ವಕೀಲ ಸಮೀರ್ ಸೋಧಿ ಪ್ರತಿನಿಧಿಸಿದ ಮಧ್ಯಸ್ಥಿಕೆದಾರರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.
ಕಳೆದ ವರ್ಷ ಕೂಡ ಇದೇ ವಿಚಾರವಾಗಿ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್ ಕೊರೊನಾ ಸಾಂಕ್ರಾಮಿಕದಿಂದಾಗಿ ಕುಟುಂಬಸ್ಥರನ್ನು ಕಳೆದುಕೊಂಡ ಕುಟುಂಬಗಳಿಗೆ 30 ದಿನಗಳ ಅವಧಿಯಲ್ಲಿ ಜಿಲ್ಲಾಡಳಿತವು ಅರ್ಜಿಗಳನ್ನು ಸ್ವೀಕರಿಸಿದ ಮೂವತ್ತು ದಿನಗಳಲ್ಲಿ 50 ಸಾವಿರ ರೂಪಾಯಿ ವಿತರಿಸಬೇಕು ಎಂದು ಹೇಳಿತ್ತು .
ಈ ವಿಚಾರಣೆಯನ್ನು ಸದ್ಯ ಫೆಬ್ರವರಿ 4ಕ್ಕೆ ಮುಂದೂಡಲಾಗಿದೆ. ಇದಕ್ಕೂ ಮುನ್ನ ರಾಜ್ಯಗಳು ಕೊರೊನಾ ಪರಿಹಾರದ ಕುರಿತಂತೆ ಕೋರ್ಟ್ಗೆ ಹೊಸ ಅಫಿಡವಿಟ್ ಸಲ್ಲಿಸಬಹುದು ಎಂದು ನಿರೀಕ್ಷಿಸಲಾಗಿದೆ.