ಮದ್ಯ ಪರವಾನಗಿ ನವೀಕರಣ ಶುಲ್ಕವನ್ನು ಕಡಿತಗೊಳಿಸುವಂತೆ ಒತ್ತಾಯಿಸಿ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್‌ಗಳು ಸಲ್ಲಿಸಿದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ . ಪದೇ ಪದೇ ಕೋವಿಡ್ನ ನೆಪವನ್ನು ನೀಡಿ ಉದ್ಯಮಿಗಳು ಅಸಾಧಾರಣ ರಿಯಾಯಿತಿಯನ್ನು ಪಡೆಯಲು ಕೋರ್ಟ್ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.
ಕಳೆದ ವರ್ಷ ಏಪ್ರಿಲ್ ನಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ, ಹೋಟೆಲ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ವಿದೇಶಿ ಮದ್ಯವನ್ನು ಮಾರಾಟ ಮಾಡಲು ರಾಜ್ಯ ಸರ್ಕಾರವು ನಿಗದಿಪಡಿಸಿದ ಪರವಾನಗಿ ನವೀಕರಣ ಶುಲ್ಕವನ್ನು ಶೇಕಡಾ ಐವತ್ತರಷ್ಟು ಕಡಿತಗೊಳಿಸಬೇಕೆಂದು ಒತ್ತಾಯಿಸಲಾಗಿತ್ತು.
ಅಸೋಸಿಯೇಷನ್ ಪರ ವಾದ ಮಂಡಿಸಿದ ವಕೀಲ ವಿರಾಗ್ ತುಳಜಾಪುರ, ಪರವಾನಗಿದಾರರು ವಾರದ ಏಳು ದಿನವೂ ಬೆಳಿಗ್ಗೆ 11.30 ರಿಂದ 1.30 ರವರೆಗೆ ತಮ್ಮ ವ್ಯವಹಾರವನ್ನು ನಡೆಸುತ್ತಾರೆ. ಸಾಂಕ್ರಾಮಿಕ ಸಮಯದಲ್ಲಿ ವ್ಯಾಪಾರದ ಸಮಯವನ್ನು ನಿರ್ಬಂಧಿಸಲಾಗಿರುವುದರಿಂದ, ಅವರು ರಿಯಾಯಿತಿ ಅಥವಾ ಪರವಾನಗಿ ಶುಲ್ಕಕ್ಕೆ ಅರ್ಹರಾಗಿದ್ದಾರೆ ಎಂದು ಹೇಳಿದರು.
ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ಮಾಧವ್ ಜಮ್ದಾರ್ ನೇತೃತ್ವದ ಪೀಠವು, ಸಾಂಕ್ರಾಮಿಕ ರೋಗವನ್ನು ಪದೇ ಪದೇ ಉಲ್ಲೇಖಿಸುವ ಮೂಲಕ ಉದ್ಯಮಿಗಳು “ಅಸಾಧಾರಣ ರಿಯಾಯಿತಿಗಳನ್ನು” ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
“ಸಾಂಕ್ರಾಮಿಕವು ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರಿದೆ. ಎಲ್ಲಾ ವ್ಯವಹಾರಗಳು ಹಾನಿಗೊಳಗಾಗಿವೆ. ಜಾಗತಿಕ ಸಂಕಷ್ಟದ ಸಂದರ್ಭದಲ್ಲಿ ವ್ಯವಹಾರಕ್ಕೆ ಎಲ್ಲರಿಗೂ ತೊಂದರೆಯಾಗಿದೆ” ಎಂದು ಹೇಳಿದೆ.