ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯ ಅಡಿಯಲ್ಲಿ ಸ್ವೀಕರಿಸಿದ 6098 ಅರ್ಜಿಗಳಲ್ಲಿ ಕೋವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಪೋಷಕರನ್ನು ಕಳೆದು ಅನಾಥರಾದ 3481 ಮಕ್ಕಳು ಯೋಜನೆ ಫಲಾನುಭವಿಗಳಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಈ ಸಂಬಂಧ ಮಾಹಿತಿ ನೀಡಿದ ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವಾಲಯ ಡಿಸೆಂಬರ್ 24ಕ್ಕೆ ಅನ್ವಯವಾಗುವಂತೆ ಪಿಎಂ ಕೇರ್ಸ್ ಯೋಜನೆಗೆ 6098 ಅರ್ಜಿಗಳು ಸಲ್ಲಿಕೆ ಆಗಿವೆ. ಈ ಪೈಕಿ 3481 ಅರ್ಜಿಗಳನ್ನು ಜಿಲ್ಲಾಡಳಿತ ಅನುಮೋದಿಸಿವೆ. ಈ ಯೋಜನೆಯ ಅಡಿಯಲ್ಲಿ 3275 ಫಲಾನುಭವಿಗಳಿಗೆ ಅಚೆ ಕಚೇರಿಯಲ್ಲಿ ಖಾತೆಗಳನ್ನು ತೆರೆಯಲಾಗಿದೆ ಎಂದು ಹೇಳಿದೆ.
ಯೋಜನೆಯ ಅಡಿಯಲ್ಲಿ ಮಕ್ಕಳ ಸಾಂಸ್ಥಿಕವಲ್ಲದ ಆರೈಕೆಗಾಗಿ ಪ್ರತಿ ಮಗುವಿಗೆ ತಿಂಗಳಿಗೆ 2 ಸಾವಿರ ರೂಪಾಯಿ ಪ್ರಾಯೋಜಕತ್ವದ ಪ್ರಮಾಣ ಹಾಗೂ ಶಿಶುಪಾಲನಾ ಸಂಸ್ಥೆಗಳಲ್ಲಿ ವಾಸಿಸುವ ಮಕ್ಕಳಿಗೆ ಪ್ರತಿ ತಿಂಗಳು 2160 ರೂಪಾಯಿ ನಿರ್ವಹಣೆ ವೆಚ್ಚವನ್ನು ನೀಡಲಾಗುತ್ತದೆ.
ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವನ್ ಸ್ಟಾಪ್ ಸೆಂಟರ್ ಅಥವಾ ಸಖಿ ಸೆಂಟರ್ನ್ನು ಸ್ಥಾಪನೆ ಮಾಡಲಾಗಿದೆ. ತುಳಿತಕ್ಕೊಳಗಾದ ಹೆಣ್ಣು ಮಕ್ಕಳಿಗೆ ವೈದ್ಯಕೀಯ ಹಾಗೂ ಕಾನೂನು ನೆರವನ್ನು ಸರ್ಕಾರ ನೀಡುತ್ತಿದೆ. ಡಿಸೆಂಬರ್ 24ರವರೆಗೆ 54 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಸಹಾಯ ಮಾಡಲಾಗಿದೆ ಎಂದು ಕೇಂದ್ರದ ಸಚಿವಾಲಯ ಇದೇ ವೇಳೆ ಮಾಹಿತಿ ನೀಡಿದೆ.