ಅನಿಲ್ ಲೋಹ್ರಾ ಜಾರ್ಖಂಡ್‌ನ ಪ್ರತಿಭಾವಂತ ಬಿಲ್ಲುಗಾರ. ರಾಷ್ಟ್ರೀಯ ಚಾಂಪಿಯನ್ ಕೂಡ ಆಗಿದ್ದಾರೆ. ಆದ್ರೆ ಜೀವನ ನಿರ್ವಹಣೆಗಾಗಿ ಕೋಳಿಗಳನ್ನು ಮಾರಾಟ ಮಾಡುವ ಸ್ಥಿತಿ ಇವರಿಗೆ ಬಂದೊದಗಿದೆ.
ಬಿಲ್ಲುಗಾರಿಕೆಗೆ ಸಂಬಂಧಪಟ್ಟ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅಭ್ಯಾಸಕ್ಕೆ ಅಗತ್ಯವಾದ ಉಪಕರಣಗಳು ಅನಿಲ್ ಬಳಿಯಿಲ್ಲ. ಬಡತನದಿಂದ ಕಂಗೆಟ್ಟಿರುವ 26ರ ಹರೆಯದ ಈ ಆಟಗಾರ ಕೋಳಿಗಳನ್ನು ಮಾರಿ ಬದುಕು ಸಾಗಿಸುತ್ತಿದ್ದಾರೆ.
ಅನಿಲ್ ಲೋಹ್ರಾ ಗಮ್ಹಾರಿಯಾ ಎಂಬ ಗ್ರಾಮದವರು. ಶಾಲಾ ದಿನಗಳಿಂದ್ಲೇ ಬಿಲ್ಲುಗಾರಿಕೆಯಲ್ಲಿ ಅವರಿಗೆ ಆಸಕ್ತಿಯಿತ್ತು. 2014 ರಲ್ಲಿ ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಸ್ಕೂಲ್ ಗೇಮ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಅದೇ ವರ್ಷ ತಾಯಿ ತೀರಿಕೊಂಡಿದ್ದರಿಂದ ಅನಿಲ್ ಕುಟುಂಬದ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಕೌಟುಂಬಿಕ ಸಮಸ್ಯೆಗಳ ನಡುವೆಯೂ ಛಲ ಬಿಡದ ಅನಿಲ್, 2019ರಲ್ಲಿ ಕಟಕ್‌ನಲ್ಲಿ ನಡೆದ ಸೀನಿಯರ್ ನ್ಯಾಷನಲ್ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದರು.
ಇದಲ್ಲದೆ ಹಲವು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪದಕ ಗೆದ್ದಿದ್ದಾರೆ. ಮನೆಯಲ್ಲಿ ವಯಸ್ಸಾದ ತಂದೆ ಇದ್ದಾರೆ. ಹೆಂಡತಿ ಮತ್ತು ಮಕ್ಕಳ ಜವಾಬ್ಧಾರಿಯೂ ಇದೆ. ಇವೆಲ್ಲದರ ನಡುವೆಯೂ ಪ್ರತಿದಿನ ಎರಡು ಗಂಟೆ ರನ್ನಿಂಗ್ ಹಾಗೂ ವ್ಯಾಯಾಮವನ್ನು ಅನಿಲ್ ತಪ್ಪಿಸುವುದಿಲ್ಲ. ಇದಾದ ಬಳಿಕ ಬೆಳಗಿನ ಜಾವದಲ್ಲಿ ದ್ವಿಚಕ್ರ ವಾಹನದಲ್ಲಿ ಕೋಳಿ ಮಾರುತ್ತಾರೆ. ಕೋಳಿ ಮಾರಿ ಬಂದ ಹಣದಿಂದ್ಲೇ ಇವರ ಜೀವನ ಸಾಗಬೇಕು.
ಬಿಲ್ಲುಗಾರಿಕೆ ಅಭ್ಯಾಸ ಮಾಡಲು ಸೂಕ್ತವಾದ ಪರಿಕರಗಳೇ ಇವರ ಬಳಿಯಿಲ್ಲ. ಹಾಗಾಗಿ ಅಭ್ಯಾಸಕ್ಕೂ ತೊಂದರೆಯಾಗುತ್ತಿದೆ. ಬಡತನ, ಕ್ರೀಡಾಪಟುವಿನ ಕನಸನ್ನೇ ಕೊಲ್ಲುತ್ತಿದೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರನ್ನು ಭೇಟಿಯಾಗಿ ಅನಿಲ್, ಸಹಾಯ ಕೋರಿದ್ದರು.
ಜಾರ್ಖಂಡ್‌ನ ಕ್ರೀಡಾ ನಿರ್ದೇಶಕರಿಗೆ ಅರ್ಜುನ್ ಮುಂಡಾ ಈ ಕುರಿತಂತೆ ಪತ್ರ ಬರೆದಿದ್ದರು. ಆದ್ರೆ ಎರಡು ವರ್ಷ ಕಳೆದರೂ ಸಚಿವರ ಮಾತಿನಂತೆ ಯಾವುದೇ ಪರಿಕರಗಳನ್ನು ಅನಿಲ್‌ಗೆ ನೀಡಿಲ್ಲ. ಇನ್ನಾದ್ರೂ ಸರ್ಕಾರ ಅನಿಲ್‌ಗೆ ಸಹಾಯ ಮಾಡಿದ್ರೆ ಭವಿಷ್ಯದ ಚಾಂಪಿಯನ್ಷಿಪ್‌ಗಳಲ್ಲಿ ಭಾರತಕ್ಕೆ ಪದಕ ತಂದುಕೊಡುವ ಭರವಸೆಯ ಆಟಗಾರನಾಗಿ ಅನಿಲ್ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ.