ಬಳ್ಳಾರಿ: ತಮ್ಮ ಜಿಲ್ಲೆ ಬಳ್ಳಾರಿಗೆ ತೆರಳಲು ಅನುಮತಿ ನೀಡುವಂತೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಸುಪ್ರೀಂ ಕೋರ್ಟ್ ಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದರು. ತಮ್ಮ ಪುತ್ರಿಗೆ ಕೆಲ ದಿನಗಳಲ್ಲಿ ಹೆರಿಗೆಯಾಗುವ ಹಿನ್ನೆಲೆಯಲ್ಲಿ ಅನುಮತಿ ನೀಡಲು ಜನಾರ್ಧನ ರೆಡ್ಡಿ ಮನವಿ ಮಾಡಿಕೊಂಡಿದ್ದರು. 10 ರಂದು ಕೋರ್ಟ್ ಆದೇಶ ಹೊರಬೀಳಲಿದೆ. ಆದರೆ ಇದೀಗ ಕೋರ್ಟ್ ಆದೇಶಕ್ಕೂ ಮುನ್ನವೇ ಬಳ್ಳಾರಿಯಲ್ಲಿ ರೆಡ್ಡಿ ಕಾಣಿಸಿಕೊಂಡಿದ್ದಾರೆ.
ಹೌದು, ನವರಾತ್ರಿ ಹಿನ್ನಲೆ ರೆಡ್ಡಿ ಸಹೋದರರು ಬಳ್ಳಾರಿ ಅಧಿದೇವತೆ ಕನಕದುರ್ಗಮ್ಮ ದೇವಿಯ ದರ್ಶನ ಪಡೆದರು. ಕುಟುಂಬ ಸಮೇತರಾಗಿ ದೇವತೆಯ ದರ್ಶನ ಮಾಡಿದ್ದಾರೆ. ಕೋರ್ಟ್ ಅರ್ಜಿ ವಿಚಾರವಾಗಿ ಮಾತನಾಡಿರುವ ಮಾಜಿ ಸಚಿವ ಜನಾರ್ಧನರೆಡ್ಡಿ ಕಳೆದ 12 ವರ್ಷಗಳಿಂದ ನನ್ನ ಕೇಸ್ ಸುಪ್ರೀಂಕೋರ್ಟ್ ನಲ್ಲಿದೆ. ಆದರೆ ತ್ವರಿತಗತಿಯಲ್ಲಿ ನನ್ನ ಕೇಸ್ ನಡೆಯುತ್ತಿಲ್ಲ. ಕೇಸ್ ಬೇಗ ವಿಚಾರಣೆ ನಡೆಸುವಂತೆ ನಾನೇ ಅರ್ಜಿ ಸಲ್ಲಿಸುವೆ. ಶೀಘ್ರವಾಗಿ ಕೇಸ್ ವಿಚಾರಣೆ ನಡೆಸಿದ್ರೆ ಬೇಗ ಕೇಸ್ ಇತ್ಯರ್ಥವಾಗುತ್ತೆ ಅನ್ನೋದು ನನ್ನ ಭಾವನೆ.
ಕಳೆದ 14 ತಿಂಗಳಿಂದ ಕುಟುಂಬದ ಜೊತೆ ಬಳ್ಳಾರಿಯಲ್ಲಿ ಇರುವೆ. ಕುಟುಂಬ ಹಾಗೂ ದೇವಸ್ಥಾನಗಳಿಗೆ ಸೀಮಿತವಾಗಿದೆ. ಸಾರ್ವಜನಿಕವಾಗಿ ನಾನು ಎಲ್ಲೂ ಬರುತ್ತಿಲ್ಲ. ಆದರೂ ಸಿಬಿಐ ನಿಂದ ನನಗೆ ಕಿರುಕುಳ ಆಗುತ್ತಿದೆ. ಸಿಬಿಐ ನವರು ನನಗೆ ಬಳ್ಳಾರಿಯಲ್ಲಿ ಇರಲು ಬಿಡುತ್ತಿಲ್ಲ. ದುರ್ಗಾಷ್ಟಮಿ ನಿಮಿತ್ತ ಪೂಜೆ ಮಾಡಲು ಬಂದಿದ್ದೇನೆ. ಮಗಳಿಗೆ ಹೆರಿಗೆ ಆಗುವ ಸಮಯ ಬಂದಿದೆ. ಈ ಸಮಯದಲ್ಲಿ ಮತ್ತೆ ಅಧಿಕಾರಿಗಳಿಂದ ಕಿರುಕುಳ ಆಗಬಹುದು ಎಂದು ನನ್ನ ವಕೀಲರು ನ್ಯಾಯಾಲಯದಲ್ಲಿ ವಾದ ಮಾಡಿದ್ದಾರೆ ಎಂದು ಹೇಳಿದ್ರು.