ಇಂದಿನಿಂದ ಕಾಲೇಜುಗಳು ಆರಂಭವಾಗಿದ್ದು, ಇದರ ಮಧ್ಯೆ ಕೆಲವೆಡೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ತಾವು ಕಾಲೇಜಿಗೆ ಬರುವುದಾಗಿ ಪಟ್ಟು ಹಿಡಿದಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಕೋರ್ಟ್ ಆದೇಶವನ್ನು ಯಾರೂ ಉಲ್ಲಂಘಿಸುವಂತಿಲ್ಲ. ಹೀಗಾಗಿ ಹಿಜಾಬ್ ಗೆ ಪಟ್ಟು ಹಿಡಿಯುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ತಲೆ ಬಾಗಲೇಬೇಕು. ಯಾರೂ ಕೂಡಾ ಹಿಜಾಬ್ ಧರಿಸಿ ತರಗತಿಗೆ ಹಾಜರಾಗುವಂತಿಲ್ಲ. ಒಂದು ವೇಳೆ ಯಾರಾದರೂ ಇದನ್ನು ಪಾಲಿಸದಿದ್ದರೆ ಅವರು ದೇಶದ ಪ್ರಜೆಗಳೇ ಅಲ್ಲ ಎಂದ ಸಚಿವರು, ತರಗತಿಗೆ ತೆರಳುವ ಮುನ್ನ ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ತೆಗೆದು ಹಾಜರಾಗಬೇಕು ಎಂದರು.
ಹಿಜಾಬ್ ಧರಿಸಿಯೇ ತಾವು ತರಗತಿಗೆ ಹಾಜರಾಗುವುದಾಗಿ ಹೇಳುತ್ತಿರುವವರು ಪ್ರತಿಭಟನೆ ಮಾಡಲಿ. ಆದರೆ ಯಾವುದೇ ಕಾರಣಕ್ಕೂ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡುವುದಿಲ್ಲವೆಂದು ಹೇಳಿದರು.