ದೇಶಾದ್ಯಂತ ಕೋಮು ದಳ್ಳುರಿ ತಾಂಡವವಾಡುತ್ತಿರುವ ಸಂದರ್ಭದಲ್ಲಿಯೇ ಕೊಲ್ಕತ್ತಾದ ಹಿಂದೂ-ಮುಸ್ಲಿಂ ಕುಟುಂಬಗಳು ಕೋಮು ಸೌಹಾರ್ದತೆಯನ್ನು ಪ್ರದರ್ಶಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿವೆ.
ಹೌರಾದ ಉಲುಬೆರಿಯಾದಲ್ಲಿನ ಕ್ಲಬ್ ನಲ್ಲಿ ಭಾನುವಾರ ಮುಸ್ಲಿಂ ವಿಧವೆ ಇದ್ದೆನೆಸಾ ಮಲ್ಲಿಕ್ ಎಂಬುವರು ತಮ್ಮ ಮಗಳ ಮದುವೆಯನ್ನು ನಿಗದಿಪಡಿಸಿದ್ದರು. ಆದರೆ, ಅಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದುದರಿಂದ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿತ್ತು. ಇದರಿಂದ ಮದುವೆ ಮುಂದೂಡುತ್ತದೆ ಎಂಬ ಆತಂಕ ಇದ್ದೆನೆಸಾಗೆ ಕಾಡುತ್ತಿತ್ತು.
ಅವರ ಈ ಆತಂಕವನ್ನು ಗಮನಿಸಿದ ಪಕ್ಕದ ಮನೆಯ ಹಿಂದೂ ಕುಟುಂಬವು ಮದುವೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿತಷ್ಟೇ ಅಲ್ಲದೇ, ಮದುವೆಯನ್ನು ಅಚ್ಚುಕಟ್ಟಾಗಿ ನೆರವೇರಿಸುವಲ್ಲಿ ಸಫಲವಾಯಿತು.
ಜವಾಬ್ದಾರಿ ವಹಿಸಿಕೊಂಡು ಮುಂದೆ ನಿಂತ ಹಿಂದೂ ಕುಟುಂಬದ ಸದಸ್ಯರು ಇದ್ದೆನೆಸಾ ಅವರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದು ಮದುವೆಯ ವಿಚಾರವನ್ನು ತಿಳಿಸಿದ್ದಾರೆ ಮತ್ತು ಪೊಲೀಸರಿಂದ ಮದುವೆಗೆ ಅನುಮತಿಯನ್ನೂ ಪಡೆದರು.
ಭಾನುವಾರ ಪ್ರತಿಭಟನೆ ನಡುವೆಯೂ ಹಿಂದೂ ಕುಟುಂಬದ ಸದಸ್ಯರು ತಮ್ಮ ಮನೆಯ ಸಮಾರಂಭವೆಂಬಂತೆ ಇದ್ದೆನೆಸಾ ಅವರ ಕುಟುಂಬದೊಂದಿಗೆ ಸೇರಿ ಕ್ಲಬ್ ಗೆ ತೆರಳಿ ಎಲ್ಲಾ ತಯಾರಿಯ ಮುಂದಾಳತ್ವ ನೋಡಿಕೊಂಡಿತು. ಮಧುಮಗನ ಸ್ವಾಗತದಿಂದ ಹಿಡಿದು ನಿಖಾವರೆಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಂಡಿತು.
ಈ ಬಗ್ಗೆ ಮಾತನಾಡಿದ ಇದ್ದೆನೆಸಾ, ಪ್ರತಿಭಟನೆಯಿಂದ ಕ್ಲಬ್ ಇರುವ ಸುತ್ತಮುತ್ತ ಪ್ರದೇಶದ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಎಲ್ಲೆಡೆ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಹೀಗಾಗಿ ನನ್ನ ಮಗಳ ಮದುವೆಯನ್ನು ಮುಂದೂಡಲೇಬೇಕಾಗುತ್ತದೆ ಎಂದು ನನಗನಿಸಿತ್ತು. ಆದರೆ, ಮದುವೆಯ ಪ್ರತಿಯೊಂದು ಜವಾಬ್ದಾರಿಯನ್ನು ತೆಗೆದುಕೊಂಡ ನನ್ನ ನೆರೆಯ ಕುಟುಂಬ ಸದಸ್ಯರು ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿ, ನನ್ನ ಮಗಳನ್ನು ಗಂಡನ ಮನೆಗೆ ತಲುಪುವಂತೆ ನೋಡಿಕೊಂಡರು ಎಂದು ಸಂತಸ ವ್ಯಕ್ತಪಡಿಸಿದರು.
ಮದುವೆ ಮಂಟಪಕ್ಕೆ ಬರುತ್ತಿದ್ದಂತೆಯೇ ಹಿಂದೂ ಕುಟುಂಬ ಸದಸ್ಯರು ಸ್ವಾಗತಿಸಿದ್ದನ್ನು ಕಂಡ ವರ ನಿಬ್ಬೆರಗಾದನಲ್ಲದೇ, ಇಷ್ಟೊಂದು ಅಚ್ಚುಕಟ್ಟಾಗಿ ಮದುವೆ ನೆರವೇರಿಸಿಕೊಟ್ಟಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಅವರು ಸುಮಾರು 300 ಜನ ಸಂಬಂಧಿಕರು, ಸ್ನೇಹಿತರನ್ನು ಮಗಳ ಮದುವೆಗೆ ಆಹ್ವಾನ ನೀಡಿದ್ದರು. ಆದರೆ, 144 ಸೆಕ್ಷನ್ ಇದ್ದ ಕಾರಣದಿಂದ 150 ಜನ ಮಾತ್ರ ಮದುವೆ ಸಮಾರಂಭಕ್ಕೆ ಬಂದಿದ್ದರಾದರೂ, ಎಲ್ಲರೂ ಸಂತೋಷದಿಂದ ವಧುವರರಿಗೆ ಹಾರೈಸಿದರು.