ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ನಾಮಪತ್ರ ಸಲ್ಲಿಸಿದ್ದಾರೆ. ಮೈನ್‌ಪುರಿ ಕ್ಷೇತ್ರದಲ್ಲಿ ಡಿಸೆಂಬರ್ 5 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8ಕ್ಕೆ ಮತ ಎಣಿಕೆ ನಿಗದಿಪಡಿಸಲಾಗಿದೆ. ಎಸ್‌ಪಿ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ನಿಧನದ ನಂತರ ಈ ಸ್ಥಾನ ತೆರವಾಗಿತ್ತು.
ಡಿಂಪಲ್ ಯಾದವ್ ಅವರು ಮೈನ್‌ಪುರಿ ಲೋಕಸಭಾ ಉಪಚುನಾವಣೆಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿಯನ್ನು ಬಹಿರಂಗಪಡಿಸಿದ್ದಾರೆ. ಆಕೆ 14 ಕೋಟಿ 32 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳ ಮಾಲೀಕರಾಗಿದ್ದಾರೆ. 2019ಕ್ಕೆ ಹೋಲಿಸಿದ್ರೆ ಡಿಂಪಲ್ ಯಾದವ್‌ರ ಆಸ್ತಿಯ ಮೌಲ್ಯ 1 ಕೋಟಿಗಿಂತಲೂ ಹೆಚ್ಚಾಗಿದೆ. ಆಗ ಡಿಂಪಲ್ ಆಸ್ತಿ 13 ಕೋಟಿ ರೂಪಾಯಿಯ ಆಸುಪಾಸಿನಲ್ಲಿತ್ತು. ಅಫಿಡವಿಟ್‌ನಲ್ಲಿ ಡಿಂಪಲ್ ತಮ್ಮ ಒಟ್ಟು ಆಸ್ತಿ 14,32,02,605 ಘೋಷಿಸಿದ್ದಾರೆ.
ಡಿಂಪಲ್ ಯಾದವ್ ಬಳಿ 2774.674 ಗ್ರಾಂ ಚಿನ್ನಾಭರಣ ಮತ್ತು 203 ಗ್ರಾಂ ಮುತ್ತುಗಳಿದ್ದು, 127.75 ಕ್ಯಾರೆಟ್ ವಜ್ರಗಳಿವೆ. ಇವೆಲ್ಲವುಗಳ ಒಟ್ಟು ವೆಚ್ಚ 59, 76, 687 ರೂಪಾಯಿ. ಇದಲ್ಲದೇ ಡಿಂಪಲ್ ಯಾದವ್ ಬಳಿ 1.25 ಲಕ್ಷ ರೂಪಾಯಿ ಮೌಲ್ಯದ ಕಂಪ್ಯೂಟರ್ ಇದೆ. ಆದರೆ, ಡಿಂಪಲ್ ಕಾರು ಅಥವಾ ಇತರ ಯಾವುದೇ ವಾಹನವನ್ನು ಹೊಂದಿಲ್ಲ. ಡಿಂಪಲ್ ಯಾದವ್ ಅವರು ಕನ್ನೌಜ್ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದೆಯಾಗಿದ್ದಾರೆ. 2012ರ ಉಪಚುನಾವಣೆಯಲ್ಲಿ ಅವರು ಮೊದಲ ಬಾರಿಗೆ ಗೆದ್ದಿದ್ದರು. ನಂತರ 2014ರ ಚುನಾವಣೆಯಲ್ಲಿ ಮತ್ತೆ ಈ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾದರು.
ಡಿಂಪಲ್ ಯಾದವ್ 1998ರಲ್ಲಿ ಲಕ್ನೋ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. 1999ರಲ್ಲಿ ಅಖಿಲೇಶ್ ಯಾದವ್ ಅವರನ್ನು ವಿವಾಹವಾದರು. ಡಿಂಪಲ್ ಯಾದವ್‌ರ ಪತಿ ಹಾಗೂ ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ 25 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.