ಕೊರೊನಾ ಲಸಿಕೆ ಅಭಿಯಾನಕ್ಕೆ ಹೆಚ್ಚು ಒತ್ತು ನೀಡಿದ ಹಿನ್ನೆಲೆಯಲ್ಲಿ ಕೊರೊನಾ ಸಾವಿನ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡು ಬರುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೋವಿಡ್ ಮೂರನೇ ಅಲೆಯ ವೇಳೆಗೆ ಹೆಚ್ಚಿನ ಜನರು ಕೊರೊನಾ ಲಸಿಕೆಗಳನ್ನು ಸ್ವೀಕರಿಸಿರುವುದರಿಂದ ಬಹುತೇಕ ಮಂದಿಯಲ್ಲಿ ತೀವ್ರತರವಾದ ಲಕ್ಷಣಗಳು ಗೋಚರವಾಗುತ್ತಿಲ್ಲ ಮತ್ತು ಸಾವಿನ ಸಂಖ್ಯೆಯಲ್ಲಂತೂ ಗಮನಾರ್ಹ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ ಎಂದು ಕೇಂದ್ರ ಹೇಳಿದೆ.
ಕೊರೊನಾ ಲಸಿಕೆ ಅಭಿಯಾನದ ವಿಚಾರವಾಗಿ ಮಾತನಾಡಿದ ಐಸಿಎಂಆರ್ ಡಿಜಿ ಬಲರಾಮ ಭಾರ್ಗವ, ಕೊರೊನಾ ಲಸಿಕೆಗಳಿಗೆ ದೇಶಕ್ಕೆ ಬಹುದೊಡ್ಡ ಪ್ರಯೋಜನವನ್ನು ನೀಡಿದೆ. ಕೊರೊನಾ ಲಸಿಕೆಯಿಂದಾಗಿ ದೇಶದಲ್ಲಿ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಕೊರೊನಾ ಲಸಿಕೆ ಅಭಿಯಾನಕ್ಕೆ ಚುರುಕುಮುಟ್ಟಿದಾಗಿನಿಂದ ಗಂಭೀರ ಸೋಂಕಿನ ಲಕ್ಷಣಗಳನ್ನು ಹೊಂದಿರುವವರು ಹಾಗೂ ಕೊರೊನಾ ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತಿದೆ ಎಂದು ಹೇಳಿದರು.
ಇನ್ನು ಮಕ್ಕಳಿಗೆ ಕೊರೊನಾ ಲಸಿಕೆ ವಿಚಾರವಾಗಿ ಮಾತನಾಡಿದ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ದೇಶದಲ್ಲಿ 52 ಪ್ರತಿಶತದಷ್ಟು 15 ರಿಂದ 18 ವರ್ಷ ಪ್ರಾಯದ ಮಕ್ಕಳು ಈಗಾಗಲೇ ಕೊರೊನಾ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದ್ದಾರೆ. ನಾವು ಕೊರೊನಾ ಲಸಿಕೆಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲಿದ್ದೇವೆ. ವೈಜ್ಞಾನಿಕ ಮಾಹಿತಿಗಳನ್ನು ಆಧರಿಸಿ ಈ ಬಗ್ಗೆ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.