ನವದೆಹಲಿ: ಅನೇಕ ಸೇವೆಗಳನ್ನು ನೀಡುತ್ತಿರುವ ಭಾರತೀಯ ಅಂಚೆ ಇಲಾಖೆ ಈಗ ಜನಸಾಮಾನ್ಯರು ಕೊರೋನಾ ಲಸಿಕೆ ಪಡೆದುಕೊಳ್ಳಲು ನೆರವಾಗಲಿದೆ.
ಅಂಚೆ ಕಚೇರಿಯ ಮೂಲಕವೂ ಕೊರೋನಾ ಲಸಿಕೆಗಾಗಿ ನೋಂದಾಯಿಸಿಕೊಳ್ಳಬಹುದಾಗಿದ್ದು, ಸ್ಮಾರ್ಟ್ ಫೋನ್ ಇಲ್ಲದವರು ಅಥವಾ ಫೋನ್ ಇದ್ದರೂ ಲಸಿಕೆಗೆ ನೋಂದಾಯಿಸಲು ಸಾಧ್ಯವಾಗದವರು ತಮ್ಮ ಸಮೀಪದ ಅಂಚೆ ಕಚೇರಿಯ ಸಹಾಯ ಪಡೆಯಬಹುದಾಗಿದೆ.
ತೆಲಂಗಾಣದ ಗ್ರಾಮೀಣ ಪ್ರದೇಶಗಳಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಗ್ರಾಮೀಣ ಪ್ರದೇಶದ ಹೆಚ್ಚಿನ ಜನ ಸ್ಮಾರ್ಟ್ಫೋನ್ ಹೊಂದಿಲ್ಲ. ಅಂತವರಿಗೆ ಅನುಕೂಲವಾಗುವಂತೆ ಭಾರತೀಯ ಅಂಚೆ ಇಲಾಖೆ ಉಚಿತವಾಗಿ ಲಸಿಕೆ ನೋಂದಣಿ ಸೌಲಭ್ಯ ಕಲ್ಪಿಸಿದೆ. ಅಂಚೆ ಕಚೇರಿಯಲ್ಲಿಯೂ ಕೊರೊನಾ ಲಸಿಕೆಗಾಗಿ ನೋಂದಣಿ ಮಾಡಿಸಬಹುದು. ರಾಜ್ಯ ಸರ್ಕಾರ ಲಸಿಕೆ ನೀಡಲಿದೆ.
ಸ್ಮಾರ್ಟ್ ಫೋನ್ ಹೊಂದಿರುವ ಹೆಚ್ಚಿನವರು ಕೋ –ವಿನ್ ಅಪ್ಲಿಕೇಶನ್ ಅನ್ನು ಸರಿಯಾಗಿ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆ ಇರುತ್ತದೆ. ಈ ಕಾರಣದಿಂದ ಅಂಚೆ ಇಲಾಖೆ ಲಸಿಕೆಗೆ ನೋಂದಣಿ ಮಾಡಿಕೊಡಲು ಮುಂದಾಗಿದೆ.
ಉಚಿತ ಸೌಲಭ್ಯ:
ಗ್ರಾಮೀಣ ಪ್ರದೇಶದಲ್ಲಿ ಅನೇಕ ಜನರು ಮೊಬೈಲ್ ಅಪ್ಲಿಕೇಶನ್ ಬಳಸಲು ಹಿಂಜರಿಯುತ್ತಿರುವುದು ಕಂಡುಬರುತ್ತದೆ. ದುಡಿಯುವ ವರ್ಗದವರು ಮೊಬೈಲ್ ಫೋನ್ ಇಲ್ಲದಿದ್ದರೆ, ಡೇಟಾ ರಿಚಾರ್ಜ್ ಹೊಂದಿಲ್ಲದಿದ್ದರೆ ಸಮಸ್ಯೆಯಾಗುತ್ತಿದೆ. ಲಸಿಕೆಗೆ ನೋಂದಾಯಿಸಲು ಫೋನ್ ನಲ್ಲಿ ಸಾಕಷ್ಟು ಡೇಡಾ ಇರುವುದಿಲ್ಲ. ಇಂತಹ ಸಮಸ್ಯೆ ನಗರ ಪ್ರದೇಶಗಳಲ್ಲಿಯೂ ಕಂಡು ಬರುತ್ತದೆ. ಹೀಗಾಗಿ, ತೆಲಂಗಾಣದ 36 ಅಂಚೆ ಕಚೇರಿ, 643 ಉಪ ಅಂಚೆ ಕಚೇರಿ ಮತ್ತು 10 ಶಾಖಾ ಅಂಚೆ ಕಚೇರಿಗಳಲ್ಲಿ ಕೊರೋನಾ ಲಸಿಕೆಗೆ ಉಚಿತ ನೋಂದಣಿ ಸೌಲಭ್ಯ ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ 800 ಅಂಚೆ ಕಚೇರಿ ಶಾಖೆಗಳನ್ನು ಸೇರ್ಪಡೆ ಮಾಡಲಾಗುವುದು.
ಈ ದಾಖಲೆ ತೆಗೆದುಕೊಂಡು ಹೋಗಿ
ಅಂಚೆ ಕಚೇರಿಯಲ್ಲಿ ಲಸಿಕೆಗೆ ನೋಂದಾಯಿಸುವವರು ಪ್ರಮುಖ ದಾಖಲೆಗಳೊಂದಿಗೆ ಹೋಗ ಬೇಕಾಗುತ್ತದೆ. ಫೋಟೋ ಗುರುತಿನ ಚೀಟಿ, ಮೊಬೈಲ್ ತೆಗೆದುಕೊಂಡು ಹೋಗಬೇಕಿದೆ. ಮೊಬೈಲ್ ಫೋನ್ ಗೆ ಓಟಿಪಿ ಬರುತ್ತದೆ ಅದರ ಮೂಲಕ ನೋಂದಣಿ ಮಾಡಬಹುದು. ಅಂಚೆ ಕಚೇರಿಯ ಸಿಬ್ಬಂದಿ ಕೋ –ವಿನ್ ಮೊಬೈಲ್ ಆಪ್ ಮೂಲಕ ಸ್ಲಾಟ್ ಬುಕ್ ಮಾಡಿ ಲಸಿಕೆಗೆ ನೋಂದಾಯಿಸುತ್ತಾರೆ. ಇದಕ್ಕಾಗಿ ಯಾವುದೇ ಶುಲ್ಕ ಪಡೆಯುವುದಿಲ್ಲ. ಜನಸಾಮಾನ್ಯರು ಉಚಿತವಾಗಿ ಈ ಸೇವೆ ಪಡೆಯಬಹುದು.
ಬುಕಿಂಗ್ ಸ್ಲಾಟ್‌ಗಳಲ್ಲಿ ತೊಂದರೆ
ಕೊರೋನಾ ಲಸಿಕೆ ನೋಂದಣಿ ಇಡೀ ದೇಶದಲ್ಲಿ ನಡೆಯುತ್ತಿದೆ. 18 ವರ್ಷ ಮೇಲ್ಪಟ್ಟವರು ಲಸಿಕೆಗಾಗಿ ನೋಂದಾಯಿಸಿಕೊಳ್ಳುವುದು ಅವಶ್ಯಕ. 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಇದು ಕಡ್ಡಾಯವಲ್ಲ. ಲಸಿಕೆ ಕೇಂದ್ರಕ್ಕೆ ಭೇಟಿ ನೀಡಿ ಅವರು ಸ್ಥಳಲ್ಲೇ ನೋಂದಾಯಿಸಿ ಲಸಿಕೆ ಪಡೆಯಬಹುದು. ಅವರು ಬಯಸಿದಲ್ಲಿ ಅವರು ತಮ್ಮ ಸ್ಲಾಟ್ ಅನ್ನು ಸಹ ಬುಕ್ ಮಾಡಬಹುದು. ಇದರಿಂದ ಲಸಿಕೆ ಕೇಂದ್ರದಲ್ಲಿ ಜನಸಂದಣಿಯನ್ನು ತಪ್ಪಿಸಬಹುದು. ಸರಿಯಾದ ಸಮಯದಲ್ಲಿ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ಲಸಿಕೆ ಸರದಿ ಬಂದಾಗ ಲಸಿಕೆ ತೆಗೆದುಕೊಳ್ಳಬಹುದು. ನಗರ ಪ್ರದೇಶಗಳಲ್ಲಿ ಜನರು ಸುಲಭವಾಗಿ ಆನ್‌ಲೈನ್‌ನಲ್ಲಿ ಸ್ಲಾಟ್‌ಗಳನ್ನು ಕಾಯ್ದಿರಿಸುತ್ತಿದ್ದಾರೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಸಮಸ್ಯೆಗಳು ಕಂಡುಬರುತ್ತಿವೆ. ವಿಶೇಷವಾಗಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇರುವಲ್ಲಿ ಲಸಿಕೆಗೆ ನೋಂದಾಯಿಸಲು ತೆಲಂಗಾಣದ ಅಂಚೆ ಕಚೇರಿಗಳಲ್ಲಿ ಸೌಲಭ್ಯ ಕಲ್ಪಿಸಲಾಗಿದೆ.