ರಾಜ್ಯದಲ್ಲಿ ಕೊರೋನಾ ಸೋಂಕು ದಿಢೀರ್ ಹೆಚ್ಚಳ ಕಂಡಿದೆ. ಕಳೆದ ವಾರದವರೆಗೂ ನೂರರ ಸಂಖ್ಯೆಯಲ್ಲಿರ್ತಿದ್ದ ಕೊರೋನಾ ಸೋಂಕಿತರ ಸಂಖ್ಯೆ, ನಾಲ್ಕು ಪಟ್ಟು ಹೆಚ್ಚಾಗಿದೆ.
ಕಳೆದ ಮೂರೂವರೆ ತಿಂಗಳಿಂದ ಸೋಂಕಿತರ ಸಂಖ್ಯೆ ಸಾವಿರ ದಾಟಿರಲಿಲ್ಲ, ಆದರೆ ವರ್ಷದ ಮೊದಲನೆ ದಿನವೇ ರಾಜ್ಯದಲ್ಲಿ 1033 ಪ್ರಕರಣಗಳು ದೃಢವಾಗಿದೆ. ಅದರಲ್ಲಿ ರಾಜಧಾನಿ ಬೆಂಗಳೂರಿನಲ್ಲೇ 810 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಜೊತೆಗೆ, ರಾಜ್ಯದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ರವರಲ್ಲೂ ಕೊರೋನಾ ದೃಢವಾಗಿದೆ.
ಇತ್ತ ಕೊರೋನಾ ಹೆಚ್ಚಳವಾಗ್ತಿದ್ದಂತೆ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಪೂರ್ಣ ಪ್ರಮಾಣವಾಗಿ ಆರಂಭವಾದ ಶಾಲೆಗಳಿಗೆ ಮತ್ತೆ ಬೀಗ ಬೀಳುತ್ತಾ ಅನ್ನೋ ಪ್ರಶ್ನೆ ಕಾಡಲು ಶುರುವಾಗಿದೆ.
ಈಗಾಗ್ಲೇ ಕೊರೋನಾ ಸೋಂಕು ಹೆಚ್ಚಳವಾಗಿರೊ ರಾಜ್ಯಗಳಲ್ಲಿ ಶಾಲೆಗಳನ್ನ ಸಂಪೂರ್ಣವಾಗಿ ಮುಚ್ಚಲಾಗಿದೆ. ತಮಿಳುನಾಡು ಸಹ ನೆನ್ನೆಯಿಂದ ಶಾಲೆಗಳನ್ನ ಬಂದ್ ಮಾಡಿದೆ. ಈಗ ರಾಜ್ಯದಲ್ಲೂ ಸೋಂಕು ಹೆಚ್ಚಳವಾಗ್ತಿರೋದು, ಶಾಲೆಗಳನ್ನು ಮುಚ್ಚಬಹುದು ಎಂದು ಹೇಳಲಾಗ್ತಿದೆ.
ಈ ಹಿಂದಿನ ಅಂಕಿಅಂಶ ನೋಡುವುದಾದರೆ, ಪಾಸಿಟಿವ್ ರೇಟ್ ಜಾಸ್ತಿ ಇರುವ ಕಡೆ ಶಾಲೆಗಳ ಆರಂಭಕ್ಕೆ ಅವಕಾಶ ನೀಡಿರಲಿಲ್ಲ. ಒಂದು ವೇಳೆ ರಾಜ್ಯದಲ್ಲಿ ಪಾಸಿಟಿವ್ ರೇಟ್ ಹೆಚ್ಚಾದರೆ ಶಾಲೆಗಳಿಗೆ ಬೀಗ ಬೀಳಬಹುದು. ಪಾಸಿಟಿವ್ ರೇಟ್ 3 ಕ್ಕೆ ಏರಿಕೆ ಆದ್ರೆ ಮೊದಲು LKG, UKG ಬಂದ್ ಆಗುವಾ ಸಾಧ್ಯತೆಯಿದೆ. ಈಗಾಗ್ಲೇ ಶಾಲೆಗಳ ಪರಿಸ್ಥಿತಿ ಅರಿಯಲು ಶಿಕ್ಷಣ ಸಚಿವರು ಸೂಚನೆ ನೀಡಿದ್ದಾರೆ.