ಕೊರೋನಾದ ಮೂರನೆಯ ಅಲೆ ಮಕ್ಕಳನ್ನು ಗುರಿಯಾಗಿಸಿಕೊಳ್ಳಲಿದೆ ಎಂಬ ಬಗ್ಗೆ ಹಲವು ಸುದ್ದಿಗಳು, ಗಾಸಿಪ್ ಗಳು ಹರಿದಾಡಿ ಹಳೆಯದಾಗಿವೆ. ಸರ್ಕಾರ ಇದೊಂದು ಸುಳ್ಳು ಸುದ್ದಿ. ಇದನ್ನು ನಿಜವೆಂದು ನಂಬದಿರಿ ಎಂದು ಹೇಳಿದೆ. ಹಾಗಿದ್ದರೂ ನಮ್ಮ ಮಕ್ಕಳನ್ನು ಮೂರನೆಯ ಅಲೆಯಿಂದ ಕಾಪಾಡಿಕೊಳ್ಳುವುದು ಹೇಗೆ?
ಮುಂದಿನ ಒಂದೆರಡು ತಿಂಗಳಲ್ಲಿ ಕೊರೋನಾ ಕಡಿಮೆಯಾಯಿತು ಎಂದೇ ಇಟ್ಟುಕೊಳ್ಳೋಣ. ಆಗ ಮಕ್ಕಳಿಗೆ ಮನೆಯಲ್ಲೇ ಕುಳಿತು ಸಾಕಾಗಿದೆ ಎಂಬ ಕಾರಣಕ್ಕೆ ಹೊರಗಡೆ ತಿರುಗಾಡಲು, ತುಂಬಾ ಜನಜಂಗುಳಿ ಇರುವ ಜಾಗಗಳಿಗೆ ಕರೆದೊಯ್ಯದಿರಿ. ಕೊರೋನಾ ಮತ್ತಿನ್ಯಾವ ರೂಪದಲ್ಲಾದರೂ ಮರಳಿ ಬಂದೀತು. ಹಾಗಾಗಿ ಮುಂದಿನ ಒಂದರೆಡು ವರ್ಷಗಳ ಕಾಲ ತೀವ್ರ ಎಚ್ಚರಿಕೆಯಿಂದಿರಿ.
ತರಕಾರಿ ಖರೀದಿ, ಶಾಪಿಂಗ್ ನೆಪ ಒಡ್ಡಿ ಮಕ್ಕಳನ್ನು ಹೊರಗೆ ಕರೆದೊಯ್ಯದಿರಿ. ಶಾಲೆಗಳಂತೂ ಮಕ್ಕಳಿಗೆ ಆನ್ ಲೈನ್ ಪಾಠವನ್ನೇ ಮಾಡುತ್ತಿದೆ. ಫೀಸ್ ಕಟ್ಟಲು ಅಥವಾ ಪುಸ್ತಕ ತರಲು ಶಾಲೆಗೆ ಹೋಗುವುದಿದ್ದರೆ ನೀವೇ ಹೋಗಿ ಬನ್ನಿ. ಮಕ್ಕಳನ್ನು ಜೊತೆಗೆ ಕರೆದೊಯ್ಯದಿರಿ.
ನೀವು ಕಚೇರಿಗೆ ತೆರಳುವವರಾದರೆ ಹೊರಗೆ ಹೋಗಿ ಬಂದ ಬಳಿಕ ಸ್ನಾನ ಮಾಡಿ. ನಂತರವೇ ಮಕ್ಕಳನ್ನು ಮುಟ್ಟಿ. ಹೊರಗಿನಿಂದ ಬಂದಾಕ್ಷಣ ಮಕ್ಕಳನ್ನು ಅಪ್ಪಿಕೊಳ್ಳುವುದು, ಕಿಸ್ ಮಾಡುವುದು ಬೇಡ. ನೀವು ಆರೋಗ್ಯವಾಗಿದ್ದರೆ ನಿಮ್ಮ ಮಕ್ಕಳೂ ಆರೋಗ್ಯದಿಂದ ಇರುತ್ತಾರೆ ಎಂಬುದನ್ನು ನೆನಪಿಡಿ.