ಕೊರೊನಾದ ಹೊಸ ರೂಪಾಂತರಿ ಓಮಿಕ್ರಾನ್ ದಕ್ಷಿಣ ಆಫ್ರಿಕಾದ ಹಲವು ಭಾಗಗಳಲ್ಲಿ ಕಾಣಿಸಿಕೊಂಡಿದ್ದು, ಈ ಸೋಂಕು ಅತಿವೇಗವಾಗಿ ಹಬ್ಬುತ್ತಿರುವ ಕಾರಣ ಎಲ್ಲೆಡೆ ಆತಂಕ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವದ ಹಲವು ರಾಷ್ಟ್ರಗಳು, ದಕ್ಷಿಣ ಆಫ್ರಿಕಾ ದೇಶಗಳಿಂದ ಆಗಮಿಸುವವರ ಮೇಲೆ ಪ್ರಯಾಣ ನಿರ್ಬಂಧ ಹೇರಿವೆ. ಆದಾಗ್ಯೂ ಕೂಡ ವಿಶ್ವದ ಇತರ ರಾಷ್ಟ್ರಗಳಲ್ಲೂ ಓಮಿಕ್ರಾನ್ ಸೋಂಕಿನ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿವೆ.
ಇದರ ಮಧ್ಯೆ ಓಮಿಕ್ರಾನ್ ಆತಂಕದಲ್ಲಿದ್ದವರಿಗೆ ನೆಮ್ಮದಿ ನೀಡುವಂತಹ ಸುದ್ದಿಯೊಂದನ್ನು ದಕ್ಷಿಣ ಆಫ್ರಿಕಾ ವೈದ್ಯಕೀಯ ಸಂಘದ ಮುಖ್ಯಸ್ಥೆ ಏಂಜೆಲಿಕ್ ನೀಡಿದ್ದಾರೆ. ಸ್ವತಃ ವೈದ್ಯೆಯಾಗಿರುವ ಅವರು ತಾವು ಕಳೆದ ಹತ್ತು ದಿನಗಳಲ್ಲಿ ಚಿಕಿತ್ಸೆ ನೀಡಿದ 30 ರೋಗಿಗಳ ಪೈಕಿ ಹತ್ತಕ್ಕೂ ಅಧಿಕ ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದು, ಈಗಾಗಲೇ ಮನೆಗೆ ತೆರಳಿದ್ದಾರೆ ಎಂದು ತಿಳಿಸಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಇವರುಗಳ ಪೈಕಿ ಅರ್ಧಕ್ಕೂ ಅಧಿಕ ಮಂದಿ ಲಸಿಕೆಯನ್ನೇ ಪಡೆದುಕೊಂಡಿರಲಿಲ್ಲ.
ಓಮಿಕ್ರಾನ್ ಸೋಂಕಿಗೊಳಗಾದವರು ಅಪರಿಚಿತ ರೋಗ ಲಕ್ಷಣಗಳನ್ನು ಹೊಂದಿದ್ದರೂ ಸಹ ಅವು ಸೌಮ್ಯವಾಗಿದ್ದವು ಎಂದು ವೈದ್ಯೆ ಏಂಜೆಲಿಕ್ ತಿಳಿಸಿದ್ದು, ಇವರುಗಳಿಗೆ ಗಂಟಲು ಕೆರೆತ, ಒಣಕೆಮ್ಮು ಹಾಗೂ ಮಾಂಸಖಂಡದಲ್ಲಿ ನೋವು ಕಾಣಿಸಿಕೊಂಡಿತ್ತು ಎಂದು ಹೇಳಿದ್ದಾರೆ. ಕೆಲವರಿಗೆ ಮಾತ್ರ ತೀವ್ರ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆಯಿಂದ ಗುಣಮುಖರಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಓಮಿಕ್ರಾನ್ ಅತ್ಯಂತ ಅಪಾಯಕಾರಿ ವೈರಸ್ ಎಂಬುದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆದುಕೊಳ್ಳುತ್ತಿರುವುದು ವಿಷಾದನೀಯ ಎಂದಿರುವ ಏಂಜೆಲಿಕ್, ಈ ಕುರಿತು ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ. ಇದಕ್ಕೂ ಮುನ್ನವೇ ಈ ರೀತಿ ವದಂತಿ ಹರಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.