ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಇದರ ಮಧ್ಯೆ ಒಮಿಕ್ರಾನ್ ಕೂಡ ಆರ್ಭಟಿಸುತ್ತಿದ್ದು, ಇವುಗಳ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಠಿಣ ನಿಯಮಾವಳಿಗಳನ್ನು ಜಾರಿಗೊಳಿಸಿವೆ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಮೊದಲಾದವುಗಳನ್ನು ಜಾರಿಗೊಳಿಸಲಾಗುತ್ತಿದ್ದು, ಇದರ ಜೊತೆಗೆ ಶಾಲಾ-ಕಾಲೇಜುಗಳಿಗೆ ಕೆಲ ರಾಜ್ಯಗಳಲ್ಲಿ ರಜೆ ಘೋಷಿಸಲಾಗಿದೆ. ಇಷ್ಟಾದರೂ ನಿಯಮಾವಳಿಗಳನ್ನು ಉಲ್ಲಂಘಿಸುವವರಿಗೇನು ಕಡಿಮೆ ಇಲ್ಲ.
ಇಂತಹುದೇ ಒಂದು ಪ್ರಕರಣದಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದರೂ ಸಹ 15 ಮಂದಿ ಅಯ್ಯಪ್ಪ ಭಕ್ತರು ಇತರ 15 ಮಂದಿಯೊಂದಿಗೆ ಒಂದೇ ಬಸ್ಸಿನಲ್ಲಿ ಶಬರಿಮಲೆ ಯಾತ್ರೆಗೆ ಹೊರಟಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಈ ವಿಚಾರವನ್ನು ಅರಿತ ಪೊಲೀಸರು ಇದೀಗ ಅವರನ್ನು ವಾಪಸ್ ಕರೆತಂದು ಬಸ್ಸನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣ ಕೆ.ಆರ್. ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಮಂಚಿ ಬೀಡಿನಲ್ಲಿ ನಡೆದಿದ್ದು, ಈ ಗ್ರಾಮದ 30 ಮಂದಿ ಮಾಲಾಧಾರಿಗಳು ಶಬರಿಮಲೆ ಯಾತ್ರೆಗೆ ಹೊರಟಿದ್ದಾರೆಂದು ಹೇಳಲಾಗಿದೆ. ಈ ಪೈಕಿ 15 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಯಾವುದೇ ಗುಣಲಕ್ಷಣಗಳು ಇರಲಿಲ್ಲವೆನ್ನಲಾಗಿದೆ. ಅಚ್ಚರಿಯ ಸಂಗತಿಯೆಂದರೆ ಇವರುಗಳು ಚಿಕಿತ್ಸೆ ಪಡೆಯದೇ ಆರೋಗ್ಯ ಇಲಾಖೆಯವರ ಕಣ್ತಪ್ಪಿಸಿ ಶಬರಿಮಲೆ ಯಾತ್ರೆಗೆ ಹೊರಟಿದ್ದು, ಇದೀಗ ಪೊಲೀಸರು ಅವರನ್ನು ವಾಪಾಸ್ ಕರೆತಂದಿದ್ದಾರೆ.