ಬೆಂಗಳೂರು: ರಾಜ್ಯ ಸೇರಿದಂತೆ ದೇಶದಲ್ಲಿ ಸೋಂಕಿತರ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗುತ್ತಿದ್ದು, ಸರ್ಕಾರವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದರೆ, ಸಮಾಧಾನಕರ ಸಂಗತಿ ಎಂದರೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಕಡಿಮೆಯಾಗಿದೆ.
ಸದ್ಯ ಪತ್ತೆಯಾಗುತ್ತಿರುವ ಸೋಂಕಿತರಲ್ಲಿ ಲಕ್ಷಣ ರಹಿತ ಹಾಗೂ ಸೌಮ್ಯ ಲಕ್ಷಣಗಳೇ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರು ಹೆಚ್ಚಾಗಿ ಮನೆಯಲ್ಲಿಯೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ 6 ಸಾವಿರದಷ್ಟು ಜನರು ಮಾತ್ರ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಶೇ.93ರಷ್ಟು ಸೋಂಕಿತರು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ.
ಆದರೆ, ಸೋಂಕಿತರ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ 12 ದಿನಗಳಲ್ಲಿ 8 ಪಟ್ಟು ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಡಿಸೆಂಬರ್ 31 ರಿಂದ ಜ.11ರ ವರೆಗೆ ಶೇ.93ರಷ್ಟು ಸೋಂಕಿತರು ಮನೆಯಲ್ಲಿಯೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಹೆಚ್ಚಾಗಿ ಕಂಡು ಬರುತ್ತಿಲ್ಲವಾದ್ದರಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆದು ಸೋಂಕಿತರು ಗುಣಮುಖರಾಗುತ್ತಿದ್ದಾರೆ.
ಸದ್ಯ 62 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಲ್ಲಿ ಕೇವಲ 1 ಸಾವಿರ ಸೋಂಕಿತರು ಕೋವಿಡ್ ಕೇರ್ ಸೆಂಟರ್ ನಲ್ಲಿ ದಾಖಲಾಗಿದ್ದರೆ, 5 ಸಾವಿರ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 58 ಸಾವಿರಕ್ಕೂ ಅಧಿಕ ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.