ಜನವರಿ 8ರಿಂದ ಬೆಂಗಳೂರಿನಲ್ಲಿ 12 ಮಂದಿ ಕೋವಿಡ್ನಿಂದ ಸಾವಿಗೀಡಾಗಿದ್ದು ಇದರಲ್ಲಿ ಹೆಚ್ಚಿನವರು ವೃದ್ಧರು ಎಂದು ತಿಳಿದು ಬಂದಿದೆ. ಇದರಲ್ಲಿ ನಾಲ್ಕು ಮಂದಿ 40 ವರ್ಷ ಒಳಗಿನವರಾಗಿದ್ದು ಅವರು ಸಹ ಕೋವಿಡ್ನಿಂದ ಮೃತಪಟ್ಟಿದ್ದಾರೆ.
ಇಬ್ಬರು ಕೊರೊನಾ ಲಸಿಕೆಯನ್ನು ಪಡೆದಿಲ್ಲ ಹಾಗೂ ಇನ್ನಿಬ್ಬರು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ ಎನ್ನಲಾಗಿದೆ.
ನಾಲ್ಕು ಕೋವಿಡ್ ಸಾವುಗಳು ಬೌರಿಂಗ್ & ಲೇಡಿ ಕರ್ಜನ್ ಆಸ್ಪತ್ರೆ ಮತ್ತು ರಿಸರ್ಚ್ ಕೇಂದ್ರದಲ್ಲಿ ಉಂಟಾಗಿದೆ. ಜನವರಿ 8ರಂದು 32 ವರ್ಷದ ಒಂದೇ ಡೋಸ್ ಕೊರೊನಾ ಲಸಿಕೆಯನ್ನು ಪಡೆದಿದ್ದ ರೋಗಿಯಲ್ಲಿ ಶ್ವಾಸಕೋಶದ ಸೋಂಕು ಉಂಟಾಗಿದ್ದರಿಂದ ಸಾವನ್ನಪ್ಪಿದ್ದರು. ಕೊರೊನಾ ಸೋಂಕು ಬಂದು 7 ದಿನಗಳ ಬಳಿಕ ಇವರು ಸಾವನ್ನಪ್ಪಿದ್ದರು ಎಂದು ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿ ಡಾ.ಎ.ಎಸ್ ಬಾಲಸುಂದರ್ ಮಾಹಿತಿ ನೀಡಿದರು.
ಇದಾದ ಬಳಿಕ ಜನವರಿ 9ರಂದು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಕೊರೊನಾ ಲಸಿಕೆಯನ್ನು ಸ್ವೀಕರಿಸದ 37 ವರ್ಷದ ರೋಗಿಯು ಸಾವನ್ನಪ್ಪಿದ್ದರು. ಜನವರಿ 10ರಂದು ಕೊರೊನಾ ಸೋಂಕು ತಗುಲಿದ ನಾಲ್ಕನೇ ದಿನಕ್ಕೆ 30 ವರ್ಷದ ರೋಗಿ ಮೃತಪಟ್ಟರು. ಇದಾದ ಬಳಿಕ ಕೊರೊನಾ ಲಸಿಕೆ ಸ್ವೀಕರಿಸಿದ 40 ವರ್ಷದ ಸೋಂಕಿತರೂ ಮೃತಪಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಲಸಿಕೆಯನ್ನು ಸ್ವೀಕರಿಸದೇ ಇರುವವರೇ ಹೆಚ್ಚಾಗಿ ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ. 3.68 ಪ್ರತಿಶತ ಲಸಿಕೆ ಪಡೆಯದ ವ್ಯಕ್ತಿಗಳು ಸೌಮ್ಯದಿಂದ ತೀವ್ರ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ಡಾ. ಬಾಲಸುಂದರ್ ಹೇಳಿದ್ದಾರೆ