ದೇಶದಲ್ಲಿ ಅತಿ ಹೆಚ್ಚು ದೈನಂದಿನ ಪ್ರಕರಣಗಳನ್ನು ವರದಿ ಮಾಡುತ್ತಿರುವ ಮಹಾರಾಷ್ಟ್ರದಲ್ಲಿ ಮತ್ತೆ ಆತಂಕ ಶುರುವಾಗಿದೆ. ಹೀಗಾಗಿ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿ ದಿನ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲು ಮುಂದಾಗಿದ್ದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಒಪ್ಪಿಗೆಗೆ ಕಾಯುತ್ತಿದ್ದಾರೆ.
ಕಳೆದ ವಾರದಂದು ತೆರೆದ ಅಥವಾ ಮುಚ್ಚಿದ ಸ್ಥಳಗಳಲ್ಲಿ ಮದುವೆ ಸೇರಿದಂತೆ ಇನ್ನಿತರ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ 50ಕ್ಕಿಂತ ಹೆಚ್ಚು ಜನರನ್ನು ಹೊಂದಿರಬಾರದು. ಹಾಗೂ ಅಂತ್ಯಕ್ರಿಯೆಯಲ್ಲಿ 20ಕ್ಕಿಂತ ಹೆಚ್ಚು ವ್ಯಕ್ತಿಗಳು ಇರಬಾರದು ಎಂದು ಆದೇಶ ನೀಡಲಾಗಿದೆ. ಪ್ರವಾಸಿ ತಾಣಗಳು ಹಾಗೂ ಜನಸಂದಣಿ ಹೆಚ್ಚಿರುವಂತಹ ಸ್ಥಳಗಳಲ್ಲಿ ಸೆಕ್ಷನ್ 144 ಜಾರಿ ಮಾಡಿದೆ. ಈ ಆದೇಶವನ್ನು ಡಿಸೆಂಬರ್ 31,2021 ರಿಂದಲೇ ಜಾರಿಗೆ ತರಲಾಗಿದ್ದು, ಮುಂದಿನ ಆದೇಶದವರೆಗೂ ಇದು ಜಾರಿಯಲ್ಲಿ ಇರುತ್ತದೆ ಎಂದು ಸರ್ಕಾರ ಹೇಳಿದೆ.
ಜನಸಂದಣಿ ಇರುವಂತಹ ಸ್ಥಳಗಳು ಕಂಡುಬಂದರೆ ಪೊಲೀಸರು ದಂಡ ವಿಧಿಸುತ್ತಾರೆ ಎಂದು ಸಚಿವ ಟೋಪೆ ಹೇಳಿದ್ದಾರೆ. ಜನಸಂದಣಿ ಇದ್ದಲ್ಲಿ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಸೂಚನೆ ನೀಡಿದ್ದೇವೆ. ಧಾರ್ಮಿಕ, ರಾಜಕೀಯ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಜನಸಂದಣಿಯಾಗಬಾರದು ಎಂದು ಹೇಳಿದರು.
ರಾಜ್ಯದಲ್ಲಿ ಆಮ್ಲಜನಕದ ಬೇಡಿಕೆಯು 700 ಮೆಟ್ರಿಕ್ ಟನ್ಗಳನ್ನು ದಾಟಿದರೆ ಹಾಗೂ ಆಸ್ಪತ್ರೆಗಳಲ್ಲಿ 40 ಪ್ರತಿಶತ ಹಾಸಿಗೆಗಳು ಭರ್ತಿಯಾದರೆ ನಾವು ಲಾಕ್ಡೌನ್ ಜಾರಿ ಮಾಡಲಿದ್ದೇವೆ. ಸದ್ಯ ಆಮ್ಲಜನಕದ ಬೇಡಿಕೆ ಕಡಿಮೆಯಿದ್ದು 15 ಪ್ರತಿಶತ ಹಾಸಿಗೆಗಳು ಭರ್ತಿಯಾಗಿವೆ ಎಂದು ಹೇಳಿದರು.
ಈ ನಡುವೆ ಮುಂಬೈನಲ್ಲಿರುವ ಎಲ್ಲಾ ಪ್ರವಾಸಿ ತಾಣಗಳನ್ನು ಭರ್ತಿ ಮಾಡಲು ಮಹಾ ಸರ್ಕಾರ ಯೋಚನೆ ನಡೆಸಿದ ಎಂದು ಸಚಿವ ಅಸ್ಲಾಮ್ ಶೇಖ್ ಹೇಳಿದ್ದಾರೆ. ಗೇಟ್ ವೇ ಆಫ್ ಇಂಡಿಯಾ, ಹ್ಯಾಂಗಿಂಗ್ ಗಾರ್ಡನ್ಸ್, ವಸ್ತುಸಂಗ್ರಹಾಲಯ ಸೇರಿದಂತೆ ವಿವಿಧ ಪ್ರವಾಸಿ ತಾಣಗಳನ್ನು ಮುಚ್ಚಲು ನಿರ್ಧರಿಸಲಾಗಿದೆ.
ಈ ನಡುವೆ ಆತಂಕಕಾರಿ ಮಾಹಿತಿ ಹೊರಹಾಕಿದ ಬಿಎಂಸಿ ಪ್ರಸ್ತುತ ಮುಂಬೈನ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೊರೊನಾ ಸೋಂಕಿತರಲ್ಲಿ ಬರೋಬ್ಬರಿ 96 ಪ್ರತಿಶತ ಮಂದಿ ಕೋವಿಡ್ 19 ಲಸಿಕೆಯ ಸಿಂಗಲ್ ಡೋಸ್ ಕೂಡ ತೆಗೆದುಕೊಂಡಿಲ್ಲ ಎಂದು ಹೇಳಿದೆ.
ಮುಂಬೈನ 186 ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ಗಳಲ್ಲಿ ದಾಖಲಾಗಿರುವ ರೋಗಿಗಳ ಪೈಕಿ 96 ಪ್ರತಿಶತ ಮಂದಿ ಒಂದೇ ಒಂದು ಡೋಸ್ ಕೊರೊನಾ ಲಸಿಕೆ ಸ್ವೀಕರಿಸಿಲ್ಲ. ಲಸಿಕೆ ಪಡೆದ ಸೋಂಕಿತರು ಐಸಿಯುವರೆಗೆ ತೆರಳುತ್ತಿಲ್ಲ ಎಂದು ಹೇಳಿದೆ.