ದೇಶದಲ್ಲಿ ಮೊದಲ ಕೊರೊನಾ ರೂಪಾಂತರಿ ವೈರಸ್ ಒಮಿಕ್ರಾನ್ ಪತ್ತೆಯಾಗಿದೆ. ಕರ್ನಾಟಕದಲ್ಲೇ ಈ ಎರಡೂ ಪ್ರಕರಣಗಳು ವರದಿಯಾಗಿದ್ದು, ದಕ್ಷಿಣ ಆಫ್ರಿಕಾದಿಂದ ಬಂದ ಓರ್ವರಿಗೆ ಹಾಗೂ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ವೈದ್ಯರೊಬ್ಬರಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಕಟ್ಟೆಚ್ಚರ ವಹಿಸಲಾಗುತ್ತಿದೆ.
ಕುತೂಹಲಕರ ಸಂಗತಿಯೆಂದರೆ ಒಮಿಕ್ರಾನ್ ಸೋಂಕು ತಗಲಿರುವ ಇಬ್ಬರೂ ಸಹ ಕೊರೊನಾದ ಎರಡೂ ಲಸಿಕೆಗಳನ್ನು ಪಡೆದಿದ್ದರೆಂದು ಹೇಳಲಾಗಿದೆ. ತಜ್ಞರು ಹೇಳುವ ಪ್ರಕಾರ ಇವರುಗಳು ಲಸಿಕೆ ಪಡೆದಿದ್ದ ಕಾರಣದಿಂದಲೇ ಹೆಚ್ಚಿನ ರೋಗ ಲಕ್ಷಣಗಳನ್ನು ಹೊಂದಿಲ್ಲವೆನ್ನಲಾಗಿದೆ. ಹೀಗಾಗಿ ಸಾರ್ವಜನಿಕರು ನಿರ್ಲಕ್ಷ್ಯ ಮಾಡದೆ ಲಸಿಕೆಗಳನ್ನು ಪಡೆಯಬೇಕು ಎಂದು ತಜ್ಞರು ಸೂಚಿಸಿದ್ದಾರೆ.
News Flash: ಒಮಿಕ್ರಾನ್ ಆತಂಕದ ಮಧ್ಯೆ ಕಳೆದ 24 ಗಂಟೆಗಳಲ್ಲಿ 9216 ಮಂದಿಗೆ ಸೋಂಕು; 391 ಮಂದಿ ಸಾವು
ಕೊರೊನಾದ ಯಾವುದೇ ಲಸಿಕೆ ಪಡೆಯದವರು ಕೂಡಲೇ ಸಮೀಪದ ಆಸ್ಪತ್ರೆಗಳಿಗೆ ಧಾವಿಸಿ ಲಸಿಕೆ ಪಡೆಯಬೇಕು ಹಾಗೂ ಮೊದಲ ಲಸಿಕೆ ಪಡೆದು ಅವಧಿ ಪೂರ್ಣಗೊಳ್ಳುತ್ತಾ ಬಂದರೂ ಸಹ ಎರಡನೇ ಲಸಿಕೆ ಪಡೆಯದವರು ಸಹ ಈಗಲೇ ಲಸಿಕೆ ಪಡೆಯುವುದು ಒಳಿತು ಎಂಬುದು ತಜ್ಞರ ಸಲಹೆಯಾಗಿದೆ.
ಲಸಿಕೆ ಪಡೆದರೆ ಒಮಿಕ್ರಾನ್ ಬರುವುದಿಲ್ಲ ಎಂದು ಹೇಳಲಾಗುವುದಿಲ್ಲ. ಆದರೆ ಇದು ರೋಗದ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಲಸಿಕೆ ಪಡೆದವರು ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಹೆಚ್ಚಾಗಿ ಬೀಳುವುದಿಲ್ಲ. ಹೀಗಾಗಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ಕೊರೊನಾ ಲಸಿಕೆ ಪಡೆಯುವುದು ಸೂಕ್ತ ಎಂದು ತಜ್ಞರು ಹೇಳಿದ್ದಾರೆ.