ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಆದಾರ್ ಪೂನಾವಾಲಾ ಸೇರಿದಂತೆ 7 ಜನರಿಗೆ ಲಖ್ನೋನ ಜಿಲ್ಲಾ ಹಾಗೂ ಸೆಶನ್ಸ್ ನ್ಯಾಯಾಲಯ ಸಮನ್ಸ್ ನೀಡಿದೆ. ಕೋವಿಶೀಲ್ಡ್ ಲಸಿಕೆಯ ಮೊದಲನೇ ಡೋಸ್ ಪಡೆದ ಬಳಿಕ ದೇಹದಲ್ಲಿ ಪ್ರತಿಕಾಯಗಳ ಉತ್ಪಾದನೆಯಾಗಿಲ್ಲವೆಂದು ವ್ಯಕ್ತಿಯೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ.
ಆದಾರ್ ಪೂನಾವಾಲಾ ಸೇರಿ 7 ಮಂದಿ ವಿರುದ್ಧ ಲಖ್ನೋನ ಆಶಿಯಾನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಪ್ರತಾಪ್ ಚಂದ್ರ ಎಪ್ರಿಲ್ 8ರಂದು ಕೋವಿಶೀಲ್ಡ್ ಮೊದಲ ಡೋಸ್ ಪಡೆದಿದ್ದಾರೆ. 28 ದಿನಗಳ ಬಳಿಕ ಎರಡನೇ ಡೋಸ್ ಪಡೆಯಬೇಕಿತ್ತು.
ಆದ್ರೆ 2ನೇ ಡೋಸ್ ನ ಅವಧಿಯನ್ನು 6 ವಾರಗಳಿಗೆ ವಿಸ್ತರಿಸಲಾಯ್ತು. ಅದರ ಬೆನ್ನಲ್ಲೇ 12 ವಾರಗಳ ಬಳಿಕ ಎರಡನೇ ಡೋಸ್ ಪಡೆಯಬೇಕೆಂದು ಕೇಂದ್ರ ಸರ್ಕಾರ ಹೊಸ ಆದೇಶ ಹೊರಡಿಸಿತ್ತು. ಕೋವಿಶೀಲ್ಡ್ ಮೊದಲ ಡೋಸ್ ಬಳಿಕ ಪ್ರತಾಪ್ ಚಂದ್ರ ಆರೋಗ್ಯದಲ್ಲಿ ಏರುಪೇರಾಗಿದೆಯಂತೆ.
ದೇಹದಲ್ಲಿ ಪ್ರತಿಕಾಯಗಳ ಉತ್ಪಾದನೆಯಿಂದ ಆ ರೀತಿ ಆಗಿದೆಯೆಂದು ಆರೋಗ್ಯಾಧಿಕಾರಿಗಳು ಸಮಜಾಯಿಶಿ ಕೊಟ್ಟಿದ್ದಾರೆ. ಆದ್ರೆ ಪರೀಕ್ಷೆ ನಡೆಸಿದಾಗ ಪ್ರತಾಪ್ ಚಂದ್ರ ದೇಹದಲ್ಲಿ ಪ್ರತಿಕಾಯಗಳೇ ಉತ್ಪಾದನೆಯಾಗಿಲ್ಲ ಅನ್ನೋದು ಗೊತ್ತಾಗಿದೆ. ಬದಲಾಗಿ ಪ್ಲೇಟ್ ಲೆಟ್ಸ್ ಸಂಖ್ಯೆ 3 ಲಕ್ಷದಿಂದ 1.5 ಲಕ್ಷಕ್ಕೆ ಇಳಿಕೆಯಾಗಿದೆ.
ಲಸಿಕೆ ತೆಗೆದುಕೊಂಡ ನಂತರ ಪ್ಲೇಟ್‌ಲೆಟ್ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿರುವುದರಿಂದ ತಾನು ಕೊರೊನಾ ವೈರಸ್ ಸೋಂಕಿಗೆ ತುತ್ತಾಗುವ ಅಪಾಯ ಹೆಚ್ಚಾಗಿದೆ ಎಂದು ಪ್ರತಾಪ್ ಚಂದ್ರ ಆರೋಪ ಮಾಡಿದ್ದಾನೆ.